ಹಿತ ಬಯಸುವವರೇ ನಿಜವಾದ ಸ್ನೇಹಿತರು

ಈ ಸುದ್ದಿಯನ್ನು ಶೇರ್ ಮಾಡಿ

ಸುಮಧುರ ಸಂಬಂಧವಾದ ‘ಸ್ನೇಹ’ಕ್ಕೆ ಗೌರವ ನೀಡುವ ದಿನ ನಾಳೆ.  ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳೆತನ. ನಮ್ಮ ನಗುವಿಗೆ, ಕಣ್ಣೀರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸಿನ ರೂಪವೇ ಸ್ನೇಹ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೆ ಗೆಳೆತನದ ಅಹ್ಲಾದಕ್ಕೆ ಸಾಕ್ಷಿ..    ಪರಿಶುದ್ಧ, ನಿಸ್ವಾರ್ಥ, ತ್ಯಾಗದಿಂದ ಕೂಡಿದ ನಿಷ್ಕಲ್ಮಶವಾದ ಸ್ನೇಹ ಸಮಾಜಕ್ಕೂ ಒಳಿತನ್ನು ಮಾಡುತ್ತದೆ. ಸ್ನೇಹದಲ್ಲಿ ಅಹಂ ಆಗಲಿ ದ್ವೇಷವಾಗಲಿ ಸುಳಿಯಲೇ ಬಾರದು. ನಮ್ಮ ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಬೇಕು. ನಾವು ನಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳುವಂತಿದ್ದು ನಾವು ಮಾಡುವ ಸ್ನೇಹ ಕೂಡ ನಮಗೆ ದಾರಿದೀಪವಾಗಬೇಕು. ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವಂತಿರಬೇಕು. ‘ನಿನ್ನ ಸ್ನೇಹಿತರನ್ನು ತೋರಿಸು ನಿನ್ನ ಗುಣವನ್ನು ಹೇಳುತ್ತೇನೆ’ ಎಂಬ ಮಾತಿದೆ. ನೋವಿನಲ್ಲಿ, ನಲಿವಿನಲ್ಲಿ, ಕಷ್ಟದಲ್ಲಿ, ಸುಖದಲ್ಲಿ ಸ್ಪಂದಿಸುವಂಥ ಹೃದಯವಂತಿಕೆ ಸ್ನೇಹದಲ್ಲಿ ಇರಬೇಕು.

friends

ಕಷ್ಟದ ಸಮಯದಲ್ಲಿ ಸಹಾಯ ಹಸ್ತ ನೀಡಿ ಧೈರ್ಯ ತುಂಬಿ ಎದೆಗುಂದದಂತೆ ಮುನ್ನುಗ್ಗಿಸುವ ಸದ್ಗುಣವು ಸ್ನೇಹಿತರಲ್ಲಿರಬೇಕು. ಕೆಲವೊಮ್ಮೆ ನಾವು ಕಷ್ಟವನ್ನಾಗಲಿ ನೋವನ್ನಾಗಲಿ ಮನೆಯವರೊಡನೆ ಹಂಚಿಕೊಳ್ಳದೆ ಆತ್ಮೀಯ ಗೆಳೆಯರೊಡನೆ ಹಂಚಿಕೊಳ್ಳುತ್ತೇವೆ. ಒಳ್ಳೆ ಸ್ನೇಹಿತರಾದರೆ ಆ ಗೆಳತಿಯು ನೋವನ್ನು ಅರಿತು ಪರಿಹಾರವನ್ನು ಸೂಚಿಸಿ ಮಾರ್ಗದರ್ಶಕರಾಗಿ ಸ್ನೇಹಕ್ಕೆ ಒಂದು ವ್ಯಾಖ್ಯಾನ ನೀಡುತ್ತಾರೆ. ಇಂದಿನ ದಿನಗಳಲ್ಲಿ ಎಂದಿನಂತೆ ಸ್ನೇಹಕ್ಕೆ ಒಂದು ನಿಖರವಾದ ಅರ್ಥವನ್ನು ನೀಡುವುದು ಕಷ್ಟವಾಗುತ್ತದೆ. ಏಕೆಂದರೆ ಇಂದಿನವರು ಸ್ನೇಹ ಎಂಬುದರ ಅರ್ಥವನ್ನು ಆಳವಾಗಿ ಅರಿತುಕೊಳ್ಳಲು ಇಷ್ಟಪಡುವುದಿಲ್ಲ. ಕೆಲ ಸ್ನೇಹಿತರು ಬಾರ್‍ಗೆ ಸೀಮಿತವಾದ್ರೆ ಇನ್ನು ಕೆಲವು ಸ್ನೇಹಿತರು ಟೈಂಪಾಸ್‍ಗೆ. ಅಲ್ಲಿ ಯಾರಮೇಲೂ ಯಾರಿಗೂ ನಂಬಿಕೆಯಿರುವುದಿಲ್ಲ. ಶೇಕ್‍ಹ್ಯಾಂಡ್ ಕೊಡುತ್ತಿರುವಾಗ ಮನಸ್ಸಲ್ಲಿ ಇನ್ನೇನೋ ಸಂಚು ನಡೆಯುತ್ತಿರುತ್ತೆ. ಪ್ರಾಮಾಣಿಕ ಸ್ನೇಹಿತರಾಗಿ, ಸ್ನೇಹವನ್ನು ಉಳಿಸಿಕೊಳ್ಳುವವರು ಅತಿ ಕಡಿಮೆ ಜನ.
ಮಹಾಭಾರತದಲ್ಲಿ  ದುರ್ಯೋಧನ ಮತ್ತು ಕರ್ಣನ ನಡುವಿನ ಸ್ನೇಹವನ್ನು ಪ್ರಪಂಚವೇ ಹೊಗಳಿದರೂ. ದುರ್ಯೋಧನನಲ್ಲಿ ಸ್ನೇಹದ ಜೊತೆ ಸ್ವಾರ್ಥವೂ ಕೂಡಿತ್ತು, ಆದರೆ ಕರ್ಣನ ಸ್ನೇಹದಲ್ಲಿ ಕಿಂಚಿತ್ತೂ ಕಲ್ಮಷವಿರಲಿಲ್ಲ. ರಾಜ್ಯವನ್ನು ಕೊಟ್ಟು ಸ್ನೇಹ ಹಸ್ತ ಚಾಚಿದ ದುರ್ಯೋ ಧನನಿಗೆ ಕರ್ಣ ಕೊನೆಯುಸಿರಿರುವ ವರೆಗೂ ಸ್ನೇಹಕ್ಕೆ ಎರಡು ಬಗೆಯದೆ ಮಹಾ ಭಾರತದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಪಾಂಡವರು ನಿನ್ನ ಸಹೋದರರು ಅವರೊಡನೆ ಯುದ್ಧ ಬೇಡ ನೀನು ದುರ್ಯೋಧನನ ಪಕ್ಷವನ್ನು ಬಿಟ್ಟು ಬಾ ಎಂದು ಶ್ರೀ ಕೃಷ್ಣ ಕರ್ಣನಿಗೆ ತಿಳಿಸಿದಾಗ ಕರ್ಣ ಸ್ನೇಹಕ್ಕೆ ದ್ರೋಹ ಬಗೆಯದೆ ದುರ್ಯೋಧನ ನನ್ನ ಆಪತ್ತಿನ ಸಮಯದಲ್ಲಿ ರಾಜ್ಯ ಕೊಟ್ಟು ಸ್ನೇಹ ಹಸ್ತ ಚಾಚಿದ್ದಾನೆ. ಅವನಿಗೆ ಮೋಸ ಮಾಡಲಾರೆ ಎಂದು ತಿಳಿಸುತ್ತಾನೆ. ಅಂದು ಕರ್ಣ ದುರ್ಯೋಧನನಿಗೆ ತೋರಿಸಿದ್ದು ಎಂತಹ ನಿಸ್ವಾರ್ಥವಾದ ಸ್ನೇಹ ಅಲ್ಲವೇ..? ಶ್ರೀ ಕೃಷ್ಣ-ಕುಚೇಲ ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರು. ಕುಚೇಲ ತನ್ನ ಬಡತನದಿಂದ ಕುಗ್ಗಿ ಸ್ನೇಹಿತÀನಾದ ಶ್ರೀ ಕೃಷ್ಣನಿಗೆ ಕೊಡಲು ತಂದಿದ್ದ ಅವಲಕ್ಕಿಯನ್ನು ಹೇಗೆ ಕೊಡುವುದೆಂದು ಯೋಚಿಸು ತ್ತಿರುವಾಗ ಕೃಷ್ಣ ತಾನೇ ಒಂದು ಮುಷ್ಟಿ ಅವಲಕ್ಕಿ ತಿಂದು ಸ್ನೇಹಿತನಲ್ಲಿದ್ದ ಹಿಂಜರಿಕೆಯನ್ನು ಹೋಗಲಾಡಿಸಿ …….ಬೇಕಾದ ಸಂಪತ್ತನ್ನು ಕೊಟ್ಟು ನಿಷ್ಕಲ್ಮಷವಾದ ಸ್ನೇಹವನ್ನು ಪ್ರಕಟಿಸುತ್ತಾನೆ. ಸ್ನೇಹ ಹಿಮಾಲಯದಂತೆ ಎತ್ತರವನ್ನು, ಸಮುದ್ರದಂತೆ ವಿಶಾಲತೆಯನ್ನು, ಭೂದೇವಿಯಂತೆ ಕ್ಷಮಾಗುಣವನ್ನು ಹೊಂದಿರಬೇಕು.

ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಯ ಪುಟಗಳನ್ನು ತಿರುವಿದರೆ ಸಾಕು, ಎಲ್ಲೋ ಒಂದು ಕಾಲಂನಲ್ಲಿ ಸ್ನೇಹಿತರಿಂದಲೇ ದರೋಡೆ, ಕೊಲೆ, ಅಪಹರಣ ಎಂದೆಲ್ಲಾ ಇರುತ್ತದೆ. ಇದಕ್ಕೆ ಕಾರಣಗಳು ಹಣ, ಒಡವೆ, ಮತ್ಯಾವುದೋ ಅತಿರೇಕದ ಆಮಿಷ ಹಾಗೂ ಇನ್ನೂ ಏನೇನೋ ಇರುತ್ತದೆ. ಬಾಲ್ಯದ ಗೆಳೆತನ, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು, ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಆದರೆ ನಂಬಿಕೆಯಿಟ್ಟ ಸ್ನೇಹಿತನಿಗೆ ಎರಡುಬಗೆಯದೇ ಸದಾ ನಾನು ನಿನ್ನೊಂದಿಗಿದ್ದೇನೆ ಎಂಬ ಆತ್ಮವಿಶ್ವಾಸವನ್ನು ತುಂಬುವ ಗುಣ ಸ್ನೇಹದಲ್ಲಿರಬೇಕು. ಅತಂಹ ಗುಣವುಳ್ಳವರನ್ನು ಸ್ನೇಹಿತ ರನ್ನಾಗಿಸಿಕೊಳ್ಳಬೇಕು.   ಸ್ನೇಹದಲ್ಲಿ ಇರಬೇಕಾದದ್ದು ಒಂದೇ ಅದೇ ವಿಶ್ವಾಸ. ಆದರೆ ಪ್ರೀತಿಯಲ್ಲಿ ಮಾತ್ರ ಸ್ನೇಹ ಹಾಗೂ ವಿಶ್ವಾಸ ಎರಡೂ ಇರಬೇಕಾಗುತ್ತದೆ.
ಇನ್ನು ಈ ಗೆಳೆತನದ ದಿನ ಪ್ರೇಮಿಗಳ ದಿನದಂತೆ ಪಾಶ್ಚಾತ್ಯರ ಬಳುವಳಿಯಾಗಿ ನಮಗೆ ಸಿಕ್ಕಿದ್ದರೂ ಸಮಾಜದ ಇತರ ವಿಶೇಷ ದಿನಗಳ ಮಧ್ಯೆ ಈ ದಿನವೂ ಹಾಸುಹೊಕ್ಕಾಗಿದೆ. ನಮ್ಮ ಕಾಲದಲ್ಲಿ ಇಂಥ ದಿನಗಳ ಆಚರಣೆ ಇರ್ಲಿಲ್ಲ ಅಂತ ಹಿಂದಿನವ್ರು ಮೂಗು ಮುರಿಯುತ್ತಿರುತ್ತಾರೆ. ಆದ್ರೇನು ಮಾಡೋದು, ಕಾಲೇಜï ಹೈಕಳಿಂದ ಹಿಡಿದು ಎಲ್‍ಕೆಜಿ ಪುಟಾಣಿಗಳ ತನಕ ಕಲರ್ ಕಲರ್ ಫ್ರೆಂಡ್‍ಶಿಪ್ ಬ್ಯಾಂಡ್ ಹಿಡ್ಕೊಂಡು ಹ್ಯಾಪಿ ಫ್ರೆಂಡ್‍ಶಿಪ್ ಡೇ ಅಂದಾಗ ಅವರ ಖುಷಿಗಾಗಿ ಆದ್ರೂ ಇರ್ಲಿ ಬಿಡಿ ಮಾರಾಯ್ರೇ ಅಂತ ಹೇಳ್ಬೇಕು ತಾನೇ? ಹಾಗೆ ನೋಡಿದ್ರೆ ಫ್ರೆಂಡ್‍ಶಿಪ್ ಅರ್ಥಾತ್ ಗೆಳೆತನಕ್ಕೂ ಒಂದು ನಿರ್ದಿಷ್ಟ ದಿನ ಅನ್ನೋದು ಬೇಕಾ ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡದೇ ಇರಲ್ಲ ಅಲ್ವಾ?

ಸ್ನೇಹ ನಿಜಕ್ಕೂ ನವಿರಾದ ಸಂಬಂಧ. ಸಾವಿರ ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬ ನಿಂತಿರುತ್ತಾನಲ್ಲಾ ಆತನೇ ನಿಜವಾದ ಸ್ನೇಹಿತ ಅದೇ ನೈಜ ಸ್ನೇಹ ಹೀಗೆ ಸ್ನೇಹಕ್ಕೆ ನಾನಾ ಕವಿಗಳು ನಾನಾ ರೀತಿಯ ಭಾಷ್ಯ ಬರೆದಿದ್ದಾರೆ. ಸ್ನೇಹ ಯಾವಾಗ, ಎಲ್ಲಿ ಬೇಕಾದರೂ ಮೂಡಬಹುದು… ನೋಡ ನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು. ಅದರೆ ಅದೇ ಸ್ನೇಹ ನಮ್ಮ ಬೆನ್ನಹಿಂದೆ ಎಲ್ಲಿಯತನಕ ಇರುತ್ತೆ ಅನ್ನೋದಷ್ಟೇ ಮುಖ್ಯ. ಇಂದು ಜೊತೆಯಲ್ಲಿ ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜೊತೆಯಲ್ಲೇ ಇರುತ್ತಾರೆ ಎನ್ನಲಾಗದು. ಆಗ ಇನ್ನಾರೋ ಆ ಜಾಗದಲ್ಲಿ ಇರಬಹುದು. ನಮ್ಮ ಮನಸ್ಸೇ ಹಾಗೆ… ಕೆಲವೊಮ್ಮೆ ಯಾರೋ… ಯಾಕೋ… ಇಷ್ಟವಾಗ್ತಾರೆ. ಅವರೇ ನಮ್ಮ ಬೆಸ್ಟ್ ಫ್ರೆಂಡ್ ಅಂತ ತಿಳಿತೀವಿ. ಅಂಥವರ ಜೊತೆ ಎಲ್ಲವನ್ನೂ ಶೇರ್ ಮಾಡ್ಕೋತೀವಿ. ಆದರೆ ಅವರು ಮುಂದೊಂದು ದಿನ ಕಾರಣ ಹೇಳದೆ ಕೈಕೊಟ್ಟುಬಿಡುತ್ತಾರೆ. ಆಗ ಅದೆಷ್ಟು ನೋವು, ಅವಮಾನ ಅನುಭವಿಸುತ್ತೀವಿ ಹೇಳಿ… ಸ್ನೇಹ ಬೆಳೆಸೋದ್ರಲ್ಲಿ ಹುಡುಗರಿಗಿಂತ ಹುಡುಗೀರೇ ಮುಂದು ಅಂತ ಹೇಳಲಾಗುತ್ತೆ. ಹುಡುಗೀರು ಸಾಮಾನ್ಯವಾಗಿ ಬೇಗನೆ ಕೈಕೊಡುವವರು ಎಂದು ಕೆಲವರು ಹೇಳಿದರೂ ಸ್ನೇಹವನ್ನು ಜತನವಾಗಿ ಕಾಪಾಡೋದ್ರಲ್ಲಿ ಹುಡುಗೀರೇ ಮುಂದು ಎನ್ನಲಾಗುತ್ತೆ. ಸಾಮಾನ್ಯವಾಗಿ ಗಂಡು-ಗಂಡಿನ ಮಧ್ಯೆ ಇರೋ ಸ್ನೇಹಕ್ಕಿಂತ ಹೆಣ್ಣು-ಹೆಣ್ಣಿನ ನಡುವಿನ ಸ್ನೇಹ ತುಂಬಾನೇ ಗಟ್ಟಿಯಾಗಿರುತ್ತೆ.

ಅದೇ ಹುಡುಗರ ವಿಚಾರಕ್ಕೆ ಬರೋದಾದ್ರೆ, ಫ್ರೆಂಡ್ಸ್ ಆಗೋರ ಸಂಖ್ಯೆಯೂ ಜಾಸ್ತಿ, ಮರೆಯುವುದೂ ಜಾಸ್ತಿ. ಕೆಲವೊಮ್ಮೆ ಒಂದೇ ಕ್ಲಾಸ್‍ನಲ್ಲಿ ಜೊತೆಯಲ್ಲೇ ಓದಿದ ಆಪ್ತಮಿತ್ರನನ್ನೇ ಮರೆತುಬಿಡುತ್ತೇವೆ.. ಆತ ಎಂದಾದರೊಂದು ದಿನ ಎದುರಿಗೆ ಸಿಕ್ಕು, ಎನ್ ಮಾರಾಯಾ ನೆನಪಿಲ್ವಾ… ಅಂದ್ರೆ ನೆನಪು ಮಾಡ್ಕೊಂಡು ನಾಲಗೆ ಕಚ್ಚುವ ಸರದಿ ನಮ್ಮದಾಗುತ್ತೆ. ಒಂದುಕ್ಷಣ ನಮ್ಮ ಸುತ್ತ ಗೆಳೆತನ, ಗೆಳೆಯ-ಗೆಳತಿಯರೇ ಇಲ್ಲ… ಏಕಾಂಗಿ ಎಂಬ ಕಲ್ಪನೆಯನ್ನು ಮಾಡಿನೋಡಿ… ಆಗ ಗೊತ್ತಾಗತ್ತೆ ಗೆಳೆತನದ  ನಿಜವಾದ ವ್ಯಾಲ್ಯೂ. ಈಗಂತೂ ಕಾಲ ತುಂಬಾನೇ ಬದಲಾಗಿದೆ. ಸಾಮಾಜಿಕ ತಾಣಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿಯನ್ನು ಮಾಡಿಕೊಟ್ಟಿವೆ. ಇಂದು ಕಾಲ ಬದಲಾಗಿದೆ, ಜೊತೆಗೆ ನಾವೂ ಬದಲಾಗಿದ್ದೇವೆ. ಲೆಟರ್ ಬರೆಯೋಕೆ ಟೈಂ ಇಲ್ಲ, ಫೋನ್ ಮಾಡೋಕೆ ಕರೆದರಗಳು ವಿಪರೀತ ಏರಿಕೆಯಾಗಿವೆ. ಹೀಗಾಗಿ ಜನರಿಗೆ ಅಂತರ್ಜಾಲ ತಾಣಗಳು ಕಡಿಮೆ ಖರ್ಚಿಗೆ ಲಾಭದಾಯಕ ಎಂಬಂತೆ ತೋರುತ್ತಿವೆ. ಫೇಸ್‍ಬುಕ್, ಟ್ವಿಟರ್ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್ ಕೊಟ್ರೆ ಆಯ್ತು. ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ. ಆದರೆ ಇವರೆಲ್ಲ ನಮ್ಮ ಬೆಸ್ಟ್ ಫ್ರೆಂಡ್‍ಗಳಾ… ಖಂಡಿತಾ ಅಲ್ಲ. ಸಾಮಾಜಿಕ ತಾಣಗಳು ಇಂದು ಸ್ನೇಹವನ್ನು ಬಿಕರಿ ಮಾಡುವ ತಾಣಗಳಾಗುತ್ತಿವೆಯೇ ಹೊರತು ಒಳ್ಳೆಯ ಸ್ನೇಹಿತರನ್ನು ಸೃಷ್ಟಿಸುವ ತಾಣಗಳಾಗುತ್ತಿಲ್ಲ.  ಏನೇ ಇರಲಿ, ಈ ದಿನದ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಸ್ನೇಹಿತರ ಜೊತೆ ಕಳೆದ ಅಮೂಲ್ಯ ದಿನಗಳನ್ನು ನೆನಪು ಮಾಡಿಕೊಳ್ಳೋಣ. ನಾನಾ ಕಾರಣಕ್ಕೆ ಮನಸ್ಸಿಗೆ ಹತ್ತಿರವಾದ ಗೆಳೆಯ-ಗೆಳತಿಯರು… ಹೀಗೆ ಎಲ್ಲರಿಗೂ ಈ ದಿನದ ಶುಭಾಶಯ…

Facebook Comments

Sri Raghav

Admin