`ರೀಲ್ಜೋಡಿ’ ಈಗ ರಿಯಲ್ ಲೈಫಲ್ಲೂ ಜೊಡಿ
ಬೆಂಗಳೂರು, ಆ.11- ಕಿರುತೆರೆ, ಬೆಳ್ಳಿತೆರೆಯ ಯಶಸ್ವಿ ಜೋಡಿ ನಿಜ ಜೀವನದಲ್ಲೂ ಒಂದಾಗುತ್ತಿದೆ. ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಎಂದೇ ಹೆಸರಾಗಿದ್ದ ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ ರಿಯಲ್ ಲೈಫ್ನಲ್ಲಿ ಒಂದಾಗಲಿದ್ದಾರೆ. ನಾಳೆ ಈ ತಾರಾ ಜೋಡಿಯ ನಿಶ್ಚಿತಾರ್ಥ ಗೋವಾದಲ್ಲಿ ನಡೆಯಲಿದ್ದು, ಎರಡೂ ಕುಟುಂಬಗಳ ಸದಸ್ಯರು ಮತ್ತು ಆತ್ಮಿಯರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಟಿವಿ ವಾಹಿನಿಯಲ್ಲಿ 2004ರಲ್ಲಿ ನಂದಗೊಕುಲ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಯಶ್ ಮತ್ತು ರಾಧಿಕ ಜೋಡಿ ಮುಂದೆ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದರು. ಇವರ ಜೋಡಿ ಯಶಸ್ವಿ ಜೋಡಿಯಾಗಿತ್ತಲ್ಲದೆ, ಇತ್ತೀಚಿನ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಮತ್ತೆ ಒಂದಾಗಿ ನಟಿಸಿದ್ದರು.
ಹಲವಾರು ದಿನಗಳಿಂದ ಇವರ ಪ್ರೀತಿ ವಿಚಾರ ಸಾಂಡಲ್ವುಡ್ನಲ್ಲಿ ಸದ್ದು ಮಾಡಿತ್ತಾದರೂ ಇಬ್ಬರೂ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಇವರ ಈ ಪ್ರೇಮಕ್ಕೆ ಮನೆಯವರ ಗ್ರೀನ್ ಸಿಗ್ನಲ್ ಸಿಕ್ಕಿ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ನಾಳೆ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಡಿಸೆಂಬರ್ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್ನಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಮದುವೆ ಸಮಾರಂಭ ನಡೆಯಲಿದ್ದು, ಒಂದು ದಿನ ಧಾರಾಮುಹೂರ್ತ, ಅಭಿಮಾನಿಗಳಿಗಾಗಿಯೇ ಒಂದು ದಿನ ಆರತಕ್ಷತೆ ನಡೆದರೆ, ಒಂದು ದಿನ ಕುಟುಂಬದವರಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ. ಬಹುತೇಕ ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ ನಡೆಸಲು ಸಿದ್ಧತೆ ನಡೆದಿದೆ. ಮೂಲತಃ ಮೈಸೂರಿನವರಾದ ನವಿನ್ಕುಮಾರ್ಗೌಡ ಚಿತ್ರರಂಗದಲ್ಲಿ ಯಶ್ ಎಂದೇ ಖ್ಯಾತರಾಗಿದ್ದು, ಮೊಗ್ಗಿನಮನಸ್ಸು ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಖಾತೆ ತೆರೆದು ಯಶ್ ಯಶಸ್ವಿ ನಾಯಕ ನಟನಾಗಿದ್ದಲ್ಲದೆ, ಜನಪ್ರಿಯತೆಯನ್ನು ಪಡೆದಿದ್ದಾರೆ.
ಮೊದಲ ಸಲ ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮ, ಗೂಗ್ಲಿ, ಗಜಕೇಸರಿ, ರಾಜಾಹುಲಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ.
ಬೆನಕ ರಂಗತಂಡದಲ್ಲಿ ತನ್ನ ಅಭಿನಯ ಕಲೆ ಆರಂಭಿಸಿದ್ದ ಯಶ್ ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿದ್ದರು. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾದ ರಾಧಿಕಾ ಪಂಡಿತ್ ಕೃಷ್ಣಪ್ರಸಾದ್ ಪಂಡಿತ್ ಹಾಗೂ ಮಂಗಳಾ ಅವರ ಸುಪುತ್ರಿ. ನಗರದ ಕಾರ್ಮೆಲ್ ಕಾನ್ವೆಂಟ್ ಕಾಲೇಜಿನಲ್ಲಿ ಬಿಕಾಂ ಪೂರೈಸಿ ನಂದಗೋಕುಲ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿ ನಂತರ ಚಿತ್ರರಂಗದಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದ್ದರು.
ಒಲವೇ ಜೀವನ ಲೆಕ್ಕಾಚಾರ, ಲವ್ ಗುರು, ಕೃಷ್ಣನ ಲವ್ಸ್ಟೋರಿ, ಗಾನಬಜಾನ, ಅಲೆಮಾರಿ, ಬ್ರೇಕಿಂಗ್ ನ್ಯೂಸ್, ಅದ್ಧೂರಿ, ಕಡ್ಡಿಪುಡಿ, ಬಹದ್ದೂರ್, ಹುಡುಗರು, ದಿಲ್ವಾಲಾದಂತಹ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಪುನೀತ್ ಜತೆಗಿನ ದೊಡ್ಮನೆ ಹುಡುಗ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಮೊಗ್ಗಿನ ಮನಸ್ಸು ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಉತ್ತಮ ನಟಿ ಪ್ರಶಸ್ತಿಯನ್ನು ರಾಧಿಕಾ ಪಡೆದರೆ, ಬೆಸ್ಟ್ ಸಪೆÇೀರ್ಟಿಂಗ್ ಆ್ಯಕ್ಟರ್ ಆಗಿ ಯಶ್ಗೆ ಪ್ರಶಸ್ತಿ ಲಭಿಸಿತ್ತು. ಇದೇ ರೀತಿ ಹಲವಾರು ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಸಾಕಷ್ಟು ಪ್ರಶಸ್ತಿಗಳನ್ನು ಇಬ್ಬರೂ ಪಡೆದಿದ್ದು, ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.