ಬ್ಯಾಂಕ್‍ಗಳ ಅಸಹಕಾರ : ವರದಿ ಸಿದ್ದಪಡಿಸಲು ಸಚಿವರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ಚಿತ್ರದುರ್ಗ,ಆ.17- ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಅನೇಕ ಬ್ಯಾಂಕ್‍ಗಳು ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಅಸಹಕಾರ ನೀಡುತ್ತಿದ್ದು ಅಂತಹ ಬ್ಯಾಂಕ್ ಮ್ಯಾನೇಜರ್‍ಗಳ ಕುರಿತು ವರದಿ ಸಿದ್ದಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ ಸೂಚಿಸಿದರು. ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಆದೇಶ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸ್ವಉದ್ಯೋಗಕ್ಕಾಗಿ ಸಾಲವನ್ನು ಸಹಾಯಧನದಲ್ಲಿ ಬ್ಯಾಂಕ್ ಮೂಲಕ ನೀಡಲಾಗುತ್ತಿದೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿಯನ್ನು ಸಬ್ಸಿಡಿ ಮೂಲಕ ಮತ್ತು ಪಶುಭಾಗ್ಯ ಯೋಜನೆಯಡಿ ಶೇ.50ರಷ್ಟು ಸಬ್ಸಿಡಿಯಡಿ ಹೈನುಗಾರಿಕೆಗೆ ಹಸುಗಳನ್ನು ಖರೀದಿಸಲು ಸಹಾಯಧನದೊಂದಿಗೆ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ. ಇವೆಲ್ಲಾ ಬಡವರ ಯೋಜನೆಗಳಾಗಿದ್ದು, ಇಂತಹ ಬಡವರ ಯೋಜನೆಗಳಿಗೆ ಬ್ಯಾಂಕ್‍ನವರು ಅಸಹಕಾರ ನೀಡುತ್ತಿರುವುದಲ್ಲದೆ ಬಡವರಿಗೆ ಬ್ಯಾಂಕ್ ಒಳಗೆ ಪ್ರವೇಶ ನೀಡುತ್ತಿಲ್ಲ. ಆದರೆ ಬ್ಯಾಂಕ್‍ಗಳ ಈ ಧೋರಣೆ ಸರಿಯಾದುದಲ್ಲ ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪಮಾತನಾಡಿ, ಹೊಸದುರ್ಗದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಿಂದ ಹೈನುಗಾರಿಕೆಗೆ ಕಪ್ಪಗೆರೆ ಎಸ್.ಸಿ.ಫಲಾನುಭವಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಮಂಜೂರಾಗಿದೆ. ಇದಕ್ಕೆ ಫಲಾನುಭವಿ ತನ್ನ ಆರು ಎಕರೆ ಜಮೀನಿನ ಜಾಮೀನು ನೀಡಿದ್ದರೂ ಇನ್ನೂ ಜಾಮೀನು ಸಾಲದೆಂದು ಸಾಲ ನೀಡಿಲ್ಲ. ಇದು ಒಂದು ಉದಾಹರಣೆ. ಹೀಗೆ ಎಷ್ಟೋ ಬ್ಯಾಂಕ್‍ನವರು ಜನರಿಗೆ ಸ್ಪಂದಿಸುವುದಿಲ್ಲ ಎಂದು ಹೇಳಿದರು. ಜಿಪಂ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್, ಮೊಳಕಾಲ್ಮುರು ಶಾಸಕರಾದ ಎಸ್.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ.ಉಪಾಧ್ಯಕ್ಷೆ ಸುಶೀಲಮ್ಮ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೇಶ್ ಪಾಟೀಲ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗೇಂದ್ರನಾಯ್ಕ, ಪ್ರಕಾಶ್‍ಮೂರ್ತಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin