ಇಟಲಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 247ಕ್ಕೆ ಏರಿಕೆ
ಅಕ್ಯುಮೊಲಿ, ಆ.25- ಇಟಲಿಯ ಮಧ್ಯಭಾಗದ ಮೇಲೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದಾಗಿ ಮೃತರ ಸಂಖ್ಯೆ ಇಂದು 247ಕ್ಕೇರಿದೆ. ಸರ್ವನಾಶವಾದ ಪರ್ವತ ತಪ್ಪಲಿನ ರಾಮಗಳ ಭಗ್ನಾವಶೇಷಗಳಡಿ ಸಿಲುಕಿರುವ ಜನರಿಗಾಗಿ ರಕ್ಷಣೆ ಕಾರ್ಯಗಳು ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಸಾವು-ನೋವು ಮತ್ತಷ್ಟು ಹೆಚ್ಚುವ ಆತಂಕವಿದೆ. ಭೂಕಂಪದ ರೌದ್ರಾವತಾರದಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆ ನಸುಕಿನಲ್ಲಿ ಕೇಂದ್ರ ಇಟಲಿ ಮೇಲೆ ಎರಗಿದ ಭೂಕಂಪದಿಂದ ಅನೇಕ ಕಟ್ಟಡಗಳು ನೆಲಸಮವಾಗಿವೆ. ಈ ಅವಶೇಷಗಳ ಅಡಿ ಅಸಂಖ್ಯಾತ ಮಂದಿ ಈಗಲೂ ಸಿಲುಕಿರುವ ಸಾಧ್ಯತೆಗಳಿದ್ದು, ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ನಿನ್ನೆ ಬೆಳಗ್ಗೆಯಿಂದ ರಕ್ಷಣೆ ಕಾರ್ಯಗಳು ನಡೆಯುತ್ತಿವೆ. ತುರ್ತು ಸ್ಥಿತಿ ಸೇವಾ ಸಿಬ್ಬಂದಿ, ಯೋಧರು, ಪೊಲೀಸರು ಮತ್ತು ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ತೀವ್ರ ಹಾನಿಗೀಡಾದ ಅಮಟ್ರೈಸ್ ಗ್ರಾಮದಲ್ಲಿ ಸಾವು-ನೋವು ಇನ್ನಷ್ಟು ಹೆಚ್ಚಾಗುವ ಭೀತಿಯನ್ನು ಪ್ರಧಾನಮಂತ್ರಿ ಮಟ್ಟಾಯಿಯೊ ರೆಂಜಿ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಭೂಮಿ ಮತ್ತೆ ಲಘುವಾಗಿ ಕಂಪಿಸಿ ಮತ್ತಷ್ಟು ಆತಂಕ ಸೃಷ್ಟಿಸಿತು.
► Follow us on – Facebook / Twitter / Google+