5 ಲಕ್ಷ ಹಣ ದೋಚಲು ಯತ್ನಿಸಿದ ದುಷ್ಕರ್ಮಿ ಸೆರೆ
ದಾಬಸ್ಪೇಟೆ, ಆ.26- ಬ್ಯಾಂಕ್ನಿಂದ 5 ಲಕ್ಷ ರೂ. ಹಣ ಡ್ರಾ ಮಾಡಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಯಾಮಾರಿಸಿ ಹಣ ದೋಚಲು ಯತ್ನಿಸಿದ್ದ ದುಷ್ಕರ್ಮಿಗಳ ಗುಂಪಿನಲ್ಲಿ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಇಲ್ಲಿ ನಡೆದಿದೆ.ವೀರಭದ್ರಸ್ವಾಮಿ ವೇ ಬ್ರಿಡ್ಜ್ನ ಲೋಕೇಶ್ ಎಂಬುವರು ದಾಬಸ್ಪೇಟೆಯ ಬ್ಯಾಂಕ್ನಲ್ಲಿ ನಿನ್ನೆ 5 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿದ ಆಂಧ್ರ ಪ್ರದೇಶದ ಚಿತ್ತೂರಿನ ಪ್ರಶಾಂತ ಮತ್ತು ಆತನ ಸಹಚರರು ಹಣ ಬೀಳುತ್ತಿದೆ ಎಂದು ಹೇಳಿ ಲೋಕೇಶ್ ಅವರ ಗಮನ ಬೇರೆಡೆ ಸೆಳೆದು ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದರಿಂದ ವಿಚಲಿತರಾದ ಲೋಕೇಶ್ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಅವರ ನೆರವಿಗೆ ಬಂದ ಸಾರ್ವಜನಿಕರು ದುಷ್ಕರ್ಮಿಗಳನ್ನು ಬೆನ್ನಟ್ಟಿ ಪ್ರಶಾಂತನನ್ನುಹಿಡಿದಿದ್ದಾರೆ. ತಕ್ಷಣ ಆತ ಪ್ರಜ್ಞೆ ತಪ್ಪಿದಂತೆ ನಾಟಕವಾಡಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಿ ಪೆÇಲೀಸರಿಗೆ ಮಾಹಿತಿ ನೀಡಲಾಗಿದೆ. ಇದೇ ವೇಳೆ ಈತನ ಬಳಿಯಿದ್ದ ಕಾರದ ಪುಡಿ, ಚಾಕು, ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಳ್ಳರು ದೋಚಿದ್ದ 5 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ. ಬಂಧಿತನನ್ನು ವಿಚಾರಣೆಗೊಳಪಡಿಸಲಾಗಿದೆ. ದಾಬಸ್ಪೇಟೆ ಪೆÇಲೀಸರು ಸಾರ್ವಜನಿಕರ ಸಮಯ ಪ್ರಜ್ಞೆಯನ್ನು ಪ್ರಶಂಸಿಸಿದ್ದಾರೆ.
► Follow us on – Facebook / Twitter / Google+