ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಗೆ ‘ಮಂತ್ರಿ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

CP-Yogishwar

ಬೆಂಗಳೂರು,ಸೆ.1- ರಾಜ್ಯದ ಜೂನಿಯರ್ ನಜೀರ್ ಸಾಬ್ ಎಂದೇ ಖ್ಯಾತಿ ಪಡೆದ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದಾರೆ. ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಜೆ.ಜರ್ಜ್ ಅವರ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಂಡ ಕೂಡಲೇ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಹುದ್ದಾಗಳನ್ನು ಭರ್ತಿ ಮಾಡಲು ಸಿದ್ಧರಾಮಯ್ಯ ತೀರ್ಮಾನಿಸಿದ್ದು, ಯೋಗೇಶ್ವರ್ಗೆ ಮಂತ್ರಿ ಸ್ಥಾನ ನೀಡಲು ಮುಖ್ಯಮಂತ್ರಿಗಳು ಸಜಗಿದ್ದಾರೆಂದು ಮೂಲಗಳು ಹೇಳಿವೆ.

ಈ ಮುನ್ನ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಹುದ್ದಾಗಳನ್ನು ಭರ್ತಿ ಮಾಡುವಾಗ ಕೆ.ಜೆ.ಜರ್ಜ್ ಹಾಗೂ ನಗರದ ಶಾಸಕ ಎಂ.ಕೃಷ್ಣಪ್ಪ ಅವರ ಹೆಸರನ್ನು ಮುಖ್ಯಮಂತ್ರಿಗಳು ಪರಿಗಣಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಆಪ್ತರ ಜತೆ ಚರ್ಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೇರವಾಗಿ ತಮ್ಮ ಮನದಿಂಗಿತವನ್ನು ತೋಡಿಕೊಂಡಿದ್ದು, ಎಂ.ಕೃಷ್ಣಪ್ಪ ಅವರ ಬದಲಿಗೆ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಾಡುವುದು ಸರ್ಕಾರದ ವರ್ಚಸ್ಸಿಗೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಯೋಗೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇಂಧನ ಸಚಿವ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಗೆಲುವಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರೆ, ವೈಯಕ್ತಿಕವಾಗಿ ಕ್ಷೇತ್ರಾದ್ಯಂತ ಹಲವು ಕೆರೆಗಳನ್ನು ಭರ್ತಿ ಮಾಡಿಸಿ ನಜೀರ್ ಸಾಬ್ ಅವರಂತೆ ನೀರಿಗಾಗಿ ಹೋರಾಡಿದ, ಕೆಲಸ ಮಾಡಿದ ನಾಯಕ ಎಂಬ ಹೆಸರು ಪಡೆದಿರುವುದು ಸಿ.ಪಿ.ಯೋಗೇಶ್ವರ್ ಅವರ ಲಕ್ಕು ಕುದುರಿಸುವಂತೆ ಮಾಡಿದೆ ಎಂಬುದು ಮೂಲಗಳ ನೇರ ಮಾತು.
ಇವತ್ತು ಚನ್ನಪಟ್ಟಣದ ಬಹುತೇಕ ಕೆರೆಗಳು ಭರ್ತಿಯಾಗುವಂತೆ ಮಾಡಿರುವ ಸಿ.ಪಿ.ಯೋಗೇಶ್ವರ್ ಶ್ರಮದಿಂದಾಗಿ ಚನ್ನಪಟ್ಟಣ ಮಾದರಿ ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಯಾಗಿದ್ದು, ಕ್ಷೇತ್ರ ಮಾತ್ರವಲ್ಲದೆ ಬೇರೆ ಕ್ಷೇತ್ರಗಳ ಹಲ ಶಾಸಕರು ಚನ್ನಪಟ್ಟಣಕ್ಕೆ ಬಂದು ಯೋಗೇಶ್ವರ್ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ.  ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ರಾಜದ್ಯಂತ ತೋಡಿಸಿದ ನಜೀರ್ ಸಾಬ್ ಅವರ ನಂತರ ನೀರಿಗಾಗಿ ಇಷ್ಟು ಶ್ರಮ ವಹಿಸಿದ ಎರಡನೆ ನಾಯಕ ನೀವೇ ಎಂದು ಮಂತ್ರಿಗಳು, ಶಾಸಕರು ಪ್ರಶಂಸಿಸುವ ಮಟ್ಟಕ್ಕೆ ಸಿ.ಪಿ.ಯೋಗೇಶ್ವರ್ ಹೆಸರು ಬೆಳೆದಿದೆ.

ಈ ಮಧ್ಯೆ ಕೆ.ಜೆ.ಜರ್ಜ್ ಅವರಿಗೆ ಡಿವೈಎಸ್ ಪಿ ಎಂ.ಕೆ.ಗಣಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಸಿಕ್ಕ ಮೇಲೆ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವುದು ನಿಶ್ಚಿತ. ಆದರೆ, ಅವರು ಸೇರಿದಂತೆ ಬೆಂಗಳೂರಿನಿಂದ ಆರು ಜನ ಮಂತ್ರಿಗಳಾಗುವುದರಿಂದ ನಗರದಿಂದ ಬೇರೆಯವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿಗಳು ತಮ್ಮ ಆಪ್ತರೆದುರು ಸ್ಪಷ್ಟವಾಗಿ ಹೇಳಿದ್ದಾರೆ. ದೇವರಾಜ ಅರಸರ ಕಾಲದಲ್ಲಿ ಬೆಂಗಳೂರು ನಗರಕ್ಕೆ ಪ್ರಾತಿನಿಧ್ಯ ನೀಡಲಾಗುತ್ತಿರಲಿಲ್ಲ. ಮುಂದೆ ಜನತಾ ಪರಿವಾರ ಅಧಿಕಾರಕ್ಕೆ ಬಂದ ಮೇಲೆ ಗೆದ್ದ ಬಹುತೇಕ ನಾಯಕರು ಬೆಂಗಳೂರಿನ ವಿವಿಧ ಕ್ಷೇತ್ರಗಳಿಂದ ಗೆದ್ದವರಾದ್ದರಿಂದ ಅವರನ್ನು ಮಂತ್ರಿ ಮಾಡುವ ಪರಿಪಾಠ ಆರಂಭವಾಯಿತು.

ಈಗ ಬೆಂಗಳೂರು ನಗರಕ್ಕೆ ಮಿತಿ ಮೀರಿದ ಪ್ರಾತಿನಿಧ್ಯ ನೀಡುವುದು ಮಾಮೂಲಿಯಾಗಿದ್ದು, ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಬೇಕು. ಬದಲಿಗೆ ಎಲ್ಲ ಜಿಗಳಿಗೆ ಪ್ರಾತಿನಿಧ್ಯ ಒದಗಿಸುವ ಕಾರ್ಯ ಆರಂಭವಾಗಬೇಕು.ಈ ದಿಸೆಯಲ್ಲಿ ಬೆಂಗಳೂರು ನಗರದಿಂದ ಇನ್ನಿಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸುವ ಬದಲು ಜರ್ಜ್ ಅವರಿಗೆ ಮಾತ್ರ ಅವಕಾಶ ನೀಡೋಣ. ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಯಿಂದ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin