ರಾಜಕೀಯ ಸ್ವಾರ್ಥಕ್ಕಾಗಿ ಎಸ್ಸಿ, ಎಸ್ಟಿ ಸಮುದಾಯ ಒಡೆಯಲು ಬಿಡುವುದಿಲ್ಲ: ಬಿಎಸ್‌ವೈ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa
ಬೆಂಗಳೂರು, ಸೆ.1-ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಸಿ, ಎಸ್ಟಿ ಸಮುದಾಯವನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.  ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್ಸಿ-ಎಸ್ಟಿ ಮೋರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಅಹಿಂದ ವರ್ಗದ ಪರಮೋಚ್ಚ ನಾಯಕ ಆಗಬೇಕೆಂಬ ಒಂದೇ ಕಾರಣಕ್ಕಾಗಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದರು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಸೇರಿದಂತೆ ಹಿಂದುಳಿದ ವರ್ಗ ಸಮುದಾಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದೆ. ಆದರೆ, ಇಂದು ಕಾಂಗ್ರೆಸ್ ಅಹಿಂದಕ್ಕೆ ನಾವೇ ವಾರಸುದಾರರು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಉದ್ದಗಲಕ್ಕೂ ಎಲ್ಲಾ ಸಾಮಜದವರಿಗೆ ಅನುಕೂಲ ಮಾಡಿಕೊಟ್ಟಿದ್ದು ಬಿಜೆಪಿ. ಕನಕದಾಸರನ್ನು ಗುರುತಿಸಿ ಕಾಗಿನೆಲೆ ಅಭಿವೃದ್ಧಿ ಪ್ರಾಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಬಾಬು ಜಗಜೀವನ ರಾವ್ ಕಟ್ಟಡ, ವಾಲ್ಮೀಕಿ ಜಯಂತಿ ಆಚರಣೆಗೆ ನಮ್ಮ ಸರ್ಕಾರ ಘೋಷಣೆ ಮಾಡಿತ್ತು.  40 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೇವಲ ವೋಟ್‌ಬ್ಯಾಂಕ್‌ಗಾಗಿ ಅಹಿಂದ ವರ್ಗದ ಮೂಗಿಗೆ ತುಪ್ಪ ಸವರುತ್ತಿದ್ದಾರೆಯೇ ಹೊರತು ಅವರಿಗೆ ಏನೂ ಸಹಾಯ ಮಾಡಿಲ್ಲ ಎಂದು ದೂರಿದರು.  ನಮ್ಮಲ್ಲಿನ ಒಡಕಿನಿಂದಾಗಿ ನಾವು ಅಕಾರ ಕಳೆದುಕೊಂಡಿದ್ದೇವೆ. ಆದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮಗೆ 150 ಸ್ಥಾನಗಳಿಸುವುದು ಕಷ್ಟಕರವಾಗಿಲ್ಲ ಎಂದು ತಿಳಿಸಿದರು. ಸಂಸದ ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ನಾವು ಹೋರಾಟ ನಡೆಸುತ್ತಿದ್ದೇವೆ. ಸೆ.4ರಂದು ಈ ಕುರಿತು ಹೋರಾಟ ಮಾಡಲಾಗುದು ಎಂದರು.

ಕಾಂಗ್ರೆಸ್ ಸರ್ಕಾರ ವ್ಯಕ್ತಿಗಳ ಸಮುದಾಯಕ್ಕೆ ಒಂದು ನಯಾಪೈಸೆ ಸಹಾಯ ಮಾಡಿಲ್ಲ. ಸಂವಿಧಾನ ಬದ್ಧವಾಗಿ ಸರ್ಕಾರದಿಂದ ಸಿಗಬೇಕಿದ್ದ ಸೌಲಭ್ಯಗಳನ್ನು ಸಿಗದಂತೆ ಮಾಡಿದ್ದು ಕಾಂಗ್ರೆಸ್. ನಮ್ಮ ಸಮುದಾಯದ ಗುಂಪಿಗೆ ಕಾಂಗ್ರೆಸ್ ಸರ್ಕಾರ ಏನು ಕೊಡುಗೆ ಕೊಟ್ಟಿದೆ ಎಂಬುದರ ಬಗ್ಗೆ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದಿಂದ 15 ಶಾಸಕರು ಹಾಗೂ ಇಬ್ಬರು ಸಂಸದರಿರಬೇಕಿತ್ತು. ಆದರೆ, 10 ಶಾಸಕರು ಹಾಗೂ ಒಬ್ಬ ಸಂಸದರಾಗಿ ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ರಾಜೀವ್‌ಗೌಡ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಮಾಜಿ ಶಾಸಕ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin