ಕ್ವಾರ್ಟರ್ ಕೊಂಡರೆ ಮೊಟ್ಟೆ, ಸ್ನ್ಯಾಕ್ಸ್ ಫ್ರೀ…! : ಈ ಊರಲ್ಲಿ ಹೆಂಡ ಮಾರಾಟಕ್ಕೂ ಕಾಂಪಿಟೇಷನ್

ಈ ಸುದ್ದಿಯನ್ನು ಶೇರ್ ಮಾಡಿ

Anad-Wine

ಬಾಗೇಪಲ್ಲಿ, ಸೆ.3- ವ್ಯಾಪಾರದಲ್ಲಿ ಪೈಪೋಟಿಗಾಗಿ ಹಲವಾರು ಕಸರತ್ತುಗಳನ್ನು ನಡೆಸುವುದನ್ನು ನಾವು ನೋಡಿರಬಹುದು. ಆದರೆ ಈ ಊರಲ್ಲಿ ಹೆಂಡ ಮಾರಾಟಕ್ಕೆ ಮೊಟ್ಟೆ ಫ್ರೀ ಮತ್ತಿತರ ಆಮಿಷ ಒಡ್ಡಲಾಗುತ್ತಿದೆ.  ಬಾಗೇಪಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮದ್ಯದಂಗಡಿಯವರು ಇದುವರೆಗೂ ಬೇಕಾಬಿಟ್ಟಿ ವ್ಯಾಪಾರ ಮಾಡುತ್ತಿದ್ದರೂ ಕುಡುಕರ ಸಾಮ್ರಾಜ್ಯ ಕುಡಿದು ತಿಂದು ತೇಗಿ ಹೋಗುತ್ತಿದ್ದರಿಂದ ಭರ್ಜರಿ ವ್ಯಾಪಾರವಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಮದ್ಯದಂಗಡಿಯ ಅಕ್ಕಪಕ್ಕದಲ್ಲೇ ಮತ್ತೆರಡು ಬಾರ್ಗಳು ತಲೆ ಎತ್ತಿರುವುದರಿಂದ ಇದೀಗ ವ್ಯಾಪಾರ ಹೆಚ್ಚಳಕ್ಕಾಗಿ ಹಲವಾರು ತಂತ್ರಗಳಿಗೆ ಮೊರೆ ಹೋಗಲಾಗಿದೆ.

ಕ್ವಾರ್ಟರ್ ಬಾಟಲ್ ತಗೊಂಡ್ರೆ ಮೊಟ್ಟೆ ಫ್ರೀ, ಸಾವಿರ ಮೇಲ್ಪಟ್ಟು ವ್ಯಾಪಾರ ಮಾಡಿದ್ರೆ ರಿಯಾಯ್ತಿ. ಪ್ಲ್ಯಾಸ್ಟಿಕ್ ಗ್ಲಾಸ್, ನಂಜಿಕೊಳ್ಳಲು ಸ್ನ್ಯಾಕ್ಸ್ ಉಚಿತ ಮತ್ತಿತರ ಆಮಿಷಗಳನ್ನು ಒಡ್ಡಲಾಗುತ್ತಿದೆ.
ಅದರಲ್ಲೂ ಸರ್ಕಾರಿ ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತದೆ ಎಂಬ ದೊಡ್ಡ ದೊಡ್ಡ ಬೋರ್ಡ್ಗಳು ಬಾರ್ಗಳ ಮುಂದೆ ಕಂಡು ಬರುತ್ತಿವೆ.  ಇದುವರೆಗೂ ಮಾಮೂಲಿ ದರಕ್ಕಿಂತ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದ್ದರೂ ತುಟಿಕ್ ಪಿಟಿಕ್ ಎನ್ನದೆ ಕುಡಿದು ಮನೆ ಸೇರುತ್ತಿದ್ದ ಕುಡುಕರ ಸಾಮ್ರಾಜ್ಯ ಎಣ್ಣೆ ಪೈಪೋಟಿಯಿಂದಾಗಿ ಕಡಿಮೆ ಬೆಲೆಗೆ ಎಣ್ಣೆ ಸಿಗುತ್ತಿರುವುದರಿಂದ ಮತ್ತಷ್ಟು ಹೆಚ್ಚು ಕುಡಿದು ತೂರಾಡುತ್ತಿದ್ದಾರಂತೆ…

ಕಣ್ಮುಚ್ಚಿ ಕುಳಿತಿರುವ ಅಬಕಾರಿ ಅಧಿಕಾರಿಗಳು: ಈ ಭಾಗದ ಕೆಲ ಬಾರ್ನವರು ತಮ್ಮ ತ್ಯಾಜ್ಯವನ್ನು ಚಿತ್ರಾವತಿ ನದಿಗೆ ಎಸೆಯುತ್ತಿದ್ದಾರೆ. ಈ ಬಾರ್ ಮುಂಭಾಗವೇ ಪುರಾತನ ಹನುಮಾನ್ ಮಂದಿರವಿದ್ದರೂ ಪರವಾನಗಿ ನೀಡಿದ್ದಾದರೂ ಹೇಗೆ? ಕುಡುಕರು ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸುವುದು ಮಾಮೂಲಾಗಿದೆ. ಕೆಲ ಬಾರ್ನವರು ಬೇಕಾಬಿಟ್ಟಿ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಅಬಕಾರಿ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೇ ಎಂದು ಈ ಭಾಗದ ನಾಗರಿಕರು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin