ಗಣೇಶ ತಂದ ವರ : ಶಾಸಕ ಎಂ.ಕೃಷ್ಣಪ್ಪಗೆ ಮಂತ್ರಿ ಪಟ್ಟ, ನಾಳೆಯೇ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

M-Krishnappa

ಬೆಂಗಳೂರು, ಸೆ.4- ರಾಜ್ಯ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕಾಗಿ ಕಾಯ್ದಿರಿಸಲಾಗಿರುವ ಒಂದು ಸ್ಥಾನಕ್ಕೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರನ್ನು ನಿಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಒಲಿದುಬರುತ್ತಿದೆ. ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಿದ್ದು, ಮತ್ತೊಂದು ಸ್ಥಾನಕ್ಕೆ ಕೆ.ಜೆ.ಜಾರ್ಜ್ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಆದರೆ, ಸದ್ಯಕ್ಕೆ ಅವರ ಮೇಲೆ ಕೇಳಿಬಂದಿರುವ ಆರೋಪಗಳಿಂದ ಮುಕ್ತರಾಗದ ಕಾರಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಉಳಿದಂತೆ ಒಕ್ಕಲಿಗರ ಕೋಟಾದಲ್ಲಿ ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಅನುಮತಿ ನೀಡಿದೆ.

ನಿನ್ನೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ನಾಳೆ ಸಂಜೆ 4 ಗಂಟೆಗೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಕೃಷ್ಣಪ್ಪ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಎಲ್ಲೆಡೆ ವಿಜಯೋತ್ಸವ ಆಚರಣೆಗಳು ನಡೆದವು. ಸಿಹಿ ಹಂಚಿ ಪಟಾಕಿ ಸಿಡಿಸಿ ಹಬ್ಬದ ಸಂಭ್ರಮದ ಜತೆ ಕೃಷ್ಣಪ್ಪ ಅವರ ಸಂಪುಟ ಸೇರ್ಪಡೆಯ ಸಂತೋಷವನ್ನು ಹಬ್ಬದಂತೆ ಆಚರಿಸಲಾಯಿತು.

ಕಳೆದ ಜೂನ್ ಅಂತ್ಯದಲ್ಲಿ ನಡೆದ ಸಂಪುಟ ಪುನಾರಚನೆ ವೇಳೆಗೆ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಡೆದ ಬಿರುಸಿನ ಚಟುವಟಿಕೆಗಳು ಅವರ ಅವಕಾಶವನ್ನು ವಂಚಿಸಿದ್ದವು. ಸಂಪುಟ ಪುನಾರಚನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗ ಸಮುದಾಯದ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಮತ್ತು ವಸತಿ ಸಚಿವರಾಗಿದ್ದ ಅಂಬರೀಶ್ ಇಬ್ಬರನ್ನೂ ಕೈ ಬಿಡಲಾಗಿತ್ತು. ಬದಲಿಗೆ ಒಕ್ಕಲಿಗ ಸಮುದಾಯದ ಯಾರಿಗೂ ಅವಕಾಶ ನೀಡಿರಲಿಲ್ಲ. ಇದು ಸಹಜವಾಗಿ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿತ್ತು.
ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಈಗ ಒಂದು ಸ್ಥಾನಕ್ಕೆ ಕೃಷ್ಣಪ್ಪ ಅವರನ್ನು ನೇಮಿಸಲಾಗುತ್ತಿದೆ, ಅಂಬರೀಶ್ ಬಳಿಯಿದ್ದ ವಸತಿ ಖಾತೆಯನ್ನೇ ಕೃಷ್ಣಪ್ಪ ಅವರಿಗೆ ನೀಡಲಾಗುತ್ತದೆ. ಮತ್ತೊಂದು ಸ್ಥಾನವನ್ನು ಕೆ.ಜೆ.ಜಾರ್ಜ್ ಅವರಿಗಾಗಿ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.

ಒಕ್ಕಲಿಗ ಸಮುದಾಯದ ಕೋಟಾದಡಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್, ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಸಚಿವರಾಗಲು ತೀವ್ರ ಲಾಬಿ ನಡೆಸಿದ್ದರು.

ಬಡ್ತಿ:

ಸಿದ್ದರಾಮಯ್ಯನವರ ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿರುವ ಎ.ಮಂಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿರುವ ವಿನಯ್ ಕುಲಕರ್ಣಿ ಅವರಿಗೆ ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin