ಸರ್ಕಾರದ ವಿರುದ್ಧ ಟೀಕೆ ರಾಜದ್ರೋಹವಲ್ಲ : ಸುಪ್ರೀಂಕೋರ್ಟ್
ನವದೆಹಲಿ, ಸೆ.6-ಸರ್ಕಾರದ ವಿರುದ್ಧ ಟೀಕಿಸುವವರ ಮೇಲೆ ರಾಜದ್ರೋಹ ಅಥವಾ ಮಾನನಷ್ಟ ಮೊಕದ್ದಮೆ ಪ್ರಕರಣಗಳನ್ನು ಹೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸಷ್ಟಪಡಿಸಿದೆ. ಈ ಮೂಲಕ ಸರ್ಕಾರದ ವಿರುದ್ಧ ಬಹಿರಂಗ ಟೀಕೆ ಮಾಡಲು ಹಿಂಜರಿಯುವ ಮಂದಿಗೆ ಸರ್ವೋಚ್ಚ ನ್ಯಾಯಾಲಯವು ಅಭಯ ನೀಡಿದೆ. ಸರ್ಕಾರದ ವಿರುದ್ಧ ಯಾರೋ ಒಬ್ಬರು ಹೇಳಿಕೆ ನೀಡಿದರೆ ಅಥವಾ ಟೀಕೆ ಮಾಡಿದರೆ ಅದು ರಾಜದ್ರೋಹ ಅಥವಾ ಮಾನನಷ್ಟ ಆರೋಪವಾಗುವುದಿಲ್ಲ. ಅಂಥವರ ವಿರುದ್ಧ ಈ ಪ್ರಕರಣಗಳನ್ನು ಹೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ಯು.ಯು.ಲಲಿತ್ ಅವರನ್ನು ಒಳಗೊಂಡ ಪೀಠ ಸ್ಪಷ್ಟಪಡಿಸಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ರಾಜದ್ರೋಹ ಕುರಿತ ಸೆಕ್ಷನ್ 124(ಎ) ಜಾರಿ ಸಂಬಂಧ ಸುಪ್ರೀಂಕೋರ್ಟ್ ಈ ಹಿಂದೆ ನೀಡಿರುವ ತೀರ್ಪಿನಂತೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾದ ಅಗತ್ಯವಿರುತ್ತದೆ ಎಂದು ಅವರು ಹೇಳಿದರು. ಕುಡಂಕುಳಂ ಅಣು ಶಕ್ತಿ ಯೋಜನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪ್ರತಿಭಟನಕಾರರ ವಿರುದ್ಧ ರಾಜದ್ರೋಹದ ಆರೋಪಗಳನ್ನು ದಾಖಲಿಸಲಾದ ವಿಷಯವನ್ನು ಸರ್ಕಾರೇತರ ಸಂಸ್ಥೆಯೊಂದರ ಪರ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು. ರಾಜದ್ರೋಹವು ಒಂದು ಗಂಭೀರ ಅಪರಾಧ. ಆದರೆ ಈ ಕಾನೂನನ್ನು ವ್ಯಾಪಕವಾಗಿ ದುರುಪಯೋಗ ಮಾಡಲಾಗುತ್ತದೆ ಎಂದು ವಾದಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್, ಸರ್ಕಾರದ ವಿರುದ್ಧ ಟೀಕಿಸುವವರ ಮೇಲೆ ರಾಜದ್ರೋಹ ಅಥವಾ ಮಾನನಷ್ಟ ಮೊಕದ್ದಮೆ ಪ್ರಕರಣಗಳನ್ನು ಹೂಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
► Follow us on – Facebook / Twitter / Google+