ಸುಪ್ರೀಂ ಆದೇಶ  ವಿರೋಧಿಸಿ  ವಿವಿಧ ರೈತ ಸಂಘಟನೆಗಳು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Supreme

ತುಮಕೂರು, ಸೆ.6-ಪದೇ ಪದೇ ರಾಜ್ಯದ ರೈತರು ನೀರಿಲ್ಲದೆ ಪರಿತಪಿಸುವ ಸಂದರ್ಭದಲ್ಲಿಯೇ ತಮಿಳುನಾಡಿಗೆ ನೀರು ಕೊಡಿ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರೈತ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.ರಾಜ್ಯದ ಸ್ಪಷ್ಟ ಚಿತ್ರಣವನ್ನು ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಲು ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ನೈತಿಕ ಹೊಣೆ ಹೊತ್ತು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ರಾಜೀನಾಮೆ ನೀಡಬೇಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಹರಿಸಬಾರದು ಎಂದು ವಿವಿಧ ರೈತ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಯುತ್ತಿದೆ, ಅದೇ ರೀತಿ ವಿಶ್ವೇಶ್ವರಯ್ಯ ಡ್ಯಾಂನಿಂದ ತಮಿಳುನಾಡಿಗೆ ನೀರು ಹೋಗುತ್ತಿದೆ.ನಮ್ಮಲ್ಲಿ ನೀರು ಇದ್ದರೆ ಕೊಡಬಹುದು. ಆದರೆ ನೀರಿಲ್ಲದೆ ನಮ್ಮ ರೈತರೇ ಸಾಯುವ ಪರಿಸ್ಥಿತಿಯಲ್ಲಿದ್ದಾರೆ. ಬೆಳೆಗಳನ್ನು ಬೆಳೆಯುವುದಕ್ಕೆ ಇರಲಿ, ಮೊದಲು ಕುಡಿಯಲು ನೀರಿಲ್ಲದೆ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಕೊಡಿ ಎಂದು ಸುಪ್ರೀಂ ಆದೇಶ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದೆ ಇರುವಾಗ ಸುಪ್ರೀಂಕೋರ್ಟ್‍ಗೆ ರಾಜ್ಯದ ಪರ ವಾದಿಸಿದ ವಕೀಲರು ಖುದ್ದಾಗಿ 10 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವುದಾಗಿ ಅಫಿಡೆವಿಟ್ ಸಲ್ಲಿಸಿದ್ದು, ರಾಜ್ಯಕ್ಕೆ ದ್ರೋಹ ಎಸಗಿದಂತಲ್ಲವೇ ಎಂದು ರೈತರು ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಕರ್ನಾಟಕದ ಪರ ವಾದ ಮಾಡುತ್ತಿರುವ ವಕೀಲ ಪಾಲಿ ನಾರಿಮನ್ ಅವರನ್ನು ಬದಲಾಯಿಸಿ ಎಂದು ಒತ್ತಡ ಹೇರಿದ್ದರು. ಆದರೆ ಈಗ ಅವರು ಮುಖ್ಯಮಂತ್ರಿಯಾದ ಮೇಲೆ ಇವರನ್ನೇ ಮುಂದುವರೆಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ಸುಪ್ರೀಂಕೋರ್ಟ್‍ನಿಂದ ತೀರ್ಪು ಹೊರಬಿದ್ದಿದ್ದು ಆದೇಶದ ಪ್ರತಿ ಇನ್ನೂ ಕೈಸೇರದೆಯೇ ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಾಜ್ಯದರೈತರ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲ. ಕೇವಲ ಮೊಸಳೆ ಕಣೀರು ಸುರಿಸುವುದು ಇವರ ಜಾಣ್ಮೆಯೇ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ರಾಜ್ಯಸರ್ಕಾರ ವಿರುದ್ಧ ರೈತರು ಹರಿಹಾಯ್ದಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin