ಸುಪ್ರೀಂ ತೀರ್ಪಿನ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಬೆಂಗಳೂರು, ಸೆ.6- ಕಾವೇರಿ ಜಲಾನಯನ ಭಾಗದಲ್ಲಿ ಎರಡು ಬೆಳೆ ಬೆಳೆಯಲು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಕೊಡಲು ಕೂಡ ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಅವಕಾಶ ನೀಡಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಂತಿಯುತ ಹೋರಾಟ ಮಾಡಬೇಕೆಂದು ಕಾವೇರಿ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.  ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯಲು ಅವಕಾಶ ನೀಡಿ ಕುಡಿಯಲು ನೀರಿಲ್ಲ ಎಂಬ ತೀರ್ಪು ಬರೆದವರು ನ್ಯಾಯಾಧೀಶರೇ ಎಂದು ಪ್ರಶ್ನಿಸಿದ ಗೌಡರು, ತಮಿಳುನಾಡು ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಆಕ್ರೋಶ ಭರಿತ ಪ್ರತಿಭಟನೆಯಿಂದ ಯಾವ ಪ್ರಯೋಜನವಿಲ್ಲ. ಶಾಂತಿಯುತ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಪರ ಸುಪ್ರೀಂಕೋರ್ಟ್‍ನಲ್ಲಿ ವಾದ ಮಾಡುತ್ತಿರುವ ಹಿರಿಯ ವಕೀಲ ನಾರಿಮನ್ ಅವರನ್ನು ಬದಲಾವಣೆ ಮಾಡಿದರೆ ಪ್ರಯೋಜನವಿಲ್ಲ. ಅವರಿಗೆ ಕಾವೇರಿ ನದಿ ವಿವಾದದ ಪೂರ್ಣ ಇತಿಹಾಸ ಗೊತ್ತಿದೆ. ಹೊಸಬರನ್ನು ತಂದರೆ ಮತ್ತೆ ಅವರು ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನುರಿತ ವಕೀಲರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕಾಗಿರುವ ಕುಡಿಯುವ ನೀರು ಹಾಗೂ ಎರಡು ಬೆಳೆ ಬೆಳೆಯಲು ಅವಕಾಶ ಇಲ್ಲದಿರುವುದರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಅದು ಸುಪ್ರೀಂಕೋರ್ಟ್‍ನಲ್ಲಿ ದಾಖಲಾಗಿದ್ದು, ಕೇಂದ್ರ ಸರ್ಕಾರ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಿಗೆ ನೋಟಿಸ್ ಕೂಡ ನೀಡಿತ್ತು ಎಂದರು.

ಸುಪ್ರೀಂಕೋರ್ಟ್‍ನ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠದ ಮುಂದೆ ವಿಶೇಷ ಮೇಲ್ಮನವಿ ವಿಚಾರಣೆಗೆ ಬಂದರೆ ನ್ಯಾಯ ಸಿಗಬಹುದು. ಆದರೆ 2007ರಿಂದ ವಿಚಾರಣೆಗೆ ಬಂದಿಲ್ಲ. ನಾವು ಕಾವೇರಿ, ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು. ಸುಪ್ರೀಂಕೋರ್ಟ್ 10 ದಿನಗಳ ಕಾಲ ನಿತ್ಯ 15 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ನಿರ್ದೇಶನ ನೀಡಿದೆ. ಒಂದು ವೇಳೆ ಕರ್ನಾಟಕ ಇನ್ನು ಮೂರು ದಿನಗಳಲ್ಲಿ ನೀರು ಬಿಡದಿದ್ದರೆ ಕಾವೇರಿ ಸೂಪರ್‍ವೈಸರ್ ಕಮಿಟಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಕನ್ನಡ ಪರಸಂಘಟನೆ, ಸಂಘ-ಸಂಸ್ಥೆಗಳು ಶಾಂತಿಯುತ ಹೋರಾಟ ಮಾಡಿ ಐಕ್ಯತೆ ಪ್ರದರ್ಶಿಸಬೇಕೆಂದರು.

50 ವರ್ಷದ ಇತಿಹಾಸದಲ್ಲಿ ಈಶಾನ್ಯ ಹಿಂಗಾರು ಮಳೆ ವಿಫಲವಾಗಿ ವಿಳಂಬವಾದರೂ ಬೆಳೆ ನಾಶವಾಗಿಲ್ಲ. ಇಂತಹ ಪರಿಸ್ಥಿತಿ ಇದ್ದರೂ ಕೂಡ ಸಾಂಬಾ ಬೆಳೆಗೆ ನೀರು ಬಿಡುವಂತೆ ಆಗ್ರಹಿಸುತ್ತಿದೆ. ತಮಿಳುನಾಡಿನಲ್ಲಿ ಬುದ್ದಿವಂತರಿದ್ದಾರೆ. ನಮ್ಮಲ್ಲಿ ತಾಳ್ಮೆ ಇಲ್ಲ. ಕೋಪ ಜಾಸ್ತಿ. ನಾವೇಕೆ ಅವರಿಗೆ ಹೋಲಿಸಿಕೊಳ್ಳಬೇಕು ಎಂದರು. ಬೆಂಗಳೂರಿನ ಬಿಜೆಪಿಯ ಮೂವರು ಸಂಸದರು, ಇಬ್ಬರು ಕೇಂದ್ರ ಸಚಿವರಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಿಗರು ಮಾತ್ರವಲ್ಲ, ಬಹು ಭಾಷಾ ಜನರಿದ್ದಾರೆ. ಕುಡಿಯುವ ನೀರು ಕೊಡಿಸುವ ಕೆಲಸವನ್ನು ಅವರು ಮಾಡಬೇಕು ಎಂದು ಹೇಳಿದರು. ಮೋದಿ ಅವರು ಕಾವೇರಿ ಆಡಳಿತ ಮಂಡಳಿ ರಚನೆ ಸಂಬಂಧಿಸಿದಂತೆ ವಿಧೇಯಕವನ್ನು ಮಂಡಿಸಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಕುಪೇಂದ್ರರೆಡ್ಡಿ, ಜೆಡಿಎಸ್ ವಕ್ತಾರ ರಮೇಶ್‍ಬಾಬು ಮತ್ತಿತರರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin