ಕಾವೇರಿ ನದಿ ಪಾತ್ರದಲ್ಲಿ ಮೋಡ ಬಿತ್ತನೆ ಕೈಬಿಟ್ಟ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Cloud
ಬೆಂಗಳೂರು, ಸೆ.7-ಕಾವೇರಿ ನದಿ ಪಾತ್ರದಲ್ಲಿ ಮಳೆಗಾಗಿ ಉದ್ದೇಶಿತ ಮೋಡ ಬಿತ್ತನೆ ಕಾರ್ಯವನ್ನು ಸರ್ಕಾರ ಕೈಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆಯಿಂದ ಮಳೆ ಬರುವ ಮುನ್ಸೂಚನೆಯೂ ಇಲ್ಲ. ಒಂದು ವೇಳೆ ಮೋಡ ಬಿತ್ತನೆ ಕಾರ್ಯವನ್ನು ಅನುಷ್ಠಾನಗೊಳಿಸಿದರೂ ಸಹ ಯಾವುದೇ ಪ್ರಯೋಜನವಿಲ್ಲ ಎಂಬ ಕಾರಣದಿಂದಾಗಿ ಮೋಡ ಬಿತ್ತನೆಯನ್ನು ಸರ್ಕಾರ ಕೈಬಿಡಲು ನಿರ್ಧರಿಸಿದೆ.  ಈ ಮೊದಲು ಮಳೆ ಕೊರತೆ ಹೆಚ್ಚಿರುವುದರಿಂದ ರಾಜ್ಯಕ್ಕೆ ಅಗತ್ಯವಿರುವ ನೀರಿಗಾಗಿ ಮಳೆ ಬರಿಸಲು ಮೋಡ ಬಿತ್ತನೆಗೆ ಸರ್ಕಾರ ಚಿಂತನೆ  ನಡೆಸಿತ್ತು. ಆದರೆ ತಜ್ಞರು ಮೋಡ ಬಿತ್ತನೆಯಿಂದ ಯಾವುದೇ ಲಾಭವಿಲ್ಲ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಕೈಬಿಟ್ಟಿದೆ.

ಜೂನ್ ಅಥವಾ ಜುಲೈ ತಿಂಗಳಲ್ಲಿ ಮೋಡಗಳು ಶೇ.80ರಷ್ಟು ಇರಲಿದ್ದು, ಆ ವೇಳೆ ಮೋಡ ಬಿತ್ತನೆ ನಡೆಸಿದರೆ ಆಗಸ್ಟ್ ವೇಳೆ ಮಳೆ ಸುರಿಯುತ್ತದೆ. ಆದರೆ ಈಗಾಗಲೇ ತಡವಾಗಿರುವುದರಿಂದ ಮೋಡ ಬಿತ್ತನೆಯಿಂದ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.
ಹಾಗಿದ್ದೂ ತಡವಾಗಿಯಾದರೂ ಅಂದರೆ ಆಗಸ್ಟ್‌ನಲ್ಲಾದರೂ ಮೋಡ ಬಿತ್ತನೆ ನಡೆಸಿದ್ದರೆ ಅಲ್ಪ ಪ್ರಮಾಣದ ಬೆಳೆ ನಿರೀಕ್ಷಿಸಬಹುದಾಗಿತ್ತು. ಆದರೆ ಇದು ಸಾಧ್ಯವಾಗದೆ ಇರುವುದರಿಂದ ಈಗ ಮೋಡ ಬಿತ್ತನೆ ಕಾರ್ಯ ಕೈಗೊಂಡರೆ ಶೇ.10ರಷ್ಟು ಮೋಡಗಳು ಮಾತ್ರ ದೊರೆಯಲಿದ್ದು, ಇದರಿಂದ ಮಳೆ ಬಿದ್ದರೆ ಬೀಳಬಹುದು, ಇಲ್ಲದೆ ಇರಬಹುದು. ಹಾಗಾಗಿ ಮಳೆ ಸುರಿಯುವ ಸಾಧ್ಯತೆ ಸಾಕಷ್ಟು ಕ್ಷೀಣಿಸಿದೆ.
ತಡವಾಗಿ ಮೋಡ ಬಿತ್ತನೆ ನಡೆಸುವುದರಿಂದ ಇತ್ತ ಮಳೆ ಬರುವ ಸಾಧ್ಯತೆಯೂ ಕಡಿಮೆ. ಜೊತೆಗೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ . ಇದರೊಟ್ಟಿಗೆ ಮೋಡ ಬಿತ್ತನೆಗಾಗಿ ಸಾಕಷ್ಟು ಹಣ ವ್ಯಯಿಸಬೇಕಾಗಿರುತ್ತದೆ. ಇಷ್ಟಾದರೂ ಮಳೆ ಬಾರದಿದ್ದರೆ ಪ್ರಯೋಜನವೇನು ಎಂಬುದು ಗಮನಾರ್ಹ ಅಂಶ.
ಹವಾಮಾನ ಇಲಾಖೆ ತಜ್ಞರು ಈ ವರ್ಷದ ಮಳೆಯ ಅಂದಾಜನ್ನು ಸಾಮಾನ್ಯವಾಗಿ 41 ವರ್ಷಗಳಲ್ಲಿ ಈ ಭಾಗದಲ್ಲಿ ಆಗಿರುವ ಮಳೆ ಪ್ರಮಾಣವನ್ನು ಆಧರಿಸಿ ಲೆಕ್ಕಾಚಾರ ಹಾಕುತ್ತದೆ.
ಆದರೆ ಈ ಬಾರಿ ಅಂದಾಜಿನಷ್ಟು ಮಳೆ ಬಂದಿಲ್ಲ. ಹೀಗಾಗಿ ಮುಂದೆ ಮಳೆ ಬರುವ ಸಾಧ್ಯತೆಯೂ ಕಡಿಮೆ ಇದ್ದು, ಪವಾಡ ಸದೃಶವಾಗಿ ಮಳೆ ಬಂದರೆ ಮುಂದಿನ ದಿನಗಳಲ್ಲಿ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯಲಿದೆ.
ರಾಜ್ಯಸರ್ಕಾರ ಸುಪ್ರೀಂ
ಕೋರ್ಟ್‌ನ ಆದೇಶದಂತೆ ನೀರು ಬಿಡುತ್ತಿರುವುದರಿಂದ ಬಾಕಿ ಉಳಿಯುವುದು ಡೆಡ್ ಸ್ಟೋರೇಜ್ ನೀರು ಮಾತ್ರ. ಈ ನೀರು ಯಾವುದೇ ಉದ್ದೇಶಕ್ಕೂ ಬಳಸಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸಲಿದೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin