ನ್ಯಾಯಾಲಯಕ್ಕೆ ಸರಿಯಾಗಿ ಮನವರಿಕೆ ಮಾಡಿಕೊಡದಿರುವುದೇ ಕಾವೇರಿ ಬಿಕ್ಕಟ್ಟಿಗೆ ಕಾರಣ : ಶೆಟ್ಟರ್
ಬೆಂಗಳೂರು , ಸೆ.8- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಉಂಟಾಗಿರುವ ಸಮಸ್ಯೆಗೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದೇ ಈ ಬಿಕ್ಕಟ್ಟಿಗೆ ಕಾರಣ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ಬಾರಿ ನ್ಯಾಯಾಲಯದಲ್ಲಿ ನಮಗೆ ಹಿನ್ನಡೆ ಉಂಟಾಗಲು ವಾಸ್ತವ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಅರ್ಥೈಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ನಮ್ಮ ದೌರ್ಬಲ್ಯವನ್ನೇ ತಮಿಳುನಾಡು ದುರುಪಯೋಗಪಡಿಸಿಕೊಂಡು ಪ್ರತಿ ಬಾರಿ ನಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು. ಕಾವೇರಿ ಕೊಳ್ಳದ 4 ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿಯಲ್ಲಿ ಇಷ್ಟು ಪ್ರಮಾಣದ ನೀರು ಶೇಖರಣೆಯಾಗಿದೆ. ಇದರಲ್ಲಿ ಕೃಷಿ ಚಟುವಟಿಕೆಗಳೇ ಕುಡಿಯುವ ನೀರಿಗೆ ಎಷ್ಟು ಬೇಕು ಎಂಬುದನ್ನು ಅಂಕಿ ಸಂಖ್ಯೆಗಳ ಸಹಿತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಇದರಲ್ಲಿ ನಾವು ವಿಫಲರಾಗಿದ್ದರಿಂದ ಕಾನೂನು ಹೋರಾಟದಲ್ಲಿ ನಮಗೆ ಹಿನ್ನಡೆಯಾಯಿತು ಎಂದು ಈ ಸಂಜೆಗೆ ತಿಳಿಸಿದರು.
ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ 25 ಟಿಎಂಸಿ ನೀರು ಬಿಡಲು ಮಧ್ಯಂತರ ಅರ್ಜಿ ಸಲ್ಲಿಸಿದ ವೇಳೆಯೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಕೂಡಲೇ ನಮ್ಮ ವಕೀಲರಿಂದ ನಮ್ಮ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಈ ಬಾರಿ ಮುಂಗಾರಿನಲ್ಲಿ ಆಗಿರುವ ಮಳೆಯ ಪ್ರಮಾಣ ಎಷ್ಟು ಹೆಕ್ಟೇರ್ನಲ್ಲಿ ಬೆಳೆ ಬೆಳೆಯಲಾಗಿದೆ. ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ ಸೇರಿದಂತೆ ಈ ಭಾಗಗಳಿಗೆ ಇಷ್ಟು ಟಿಎಂಸಿ ನೀರು ಬೇಕಿದೆ ಎಂಬುದನ್ನು ತಿಳಿಸಬೇಕಿತ್ತು ಎಂದರು.
ಸರ್ಕಾರವೇ ಒಪ್ಪಿಕೊಂಡಿದೆ:
ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಮೇಲೆ ಅಫಿಡೆವಿಟ್ನಲ್ಲಿ ಪ್ರತಿ ದಿನ 10,000 ಟಿಎಂಸಿ ನೀರು ಬಿಡುವುದಾಗಿ ಸರ್ಕಾರವೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ. ಸರ್ಕಾರ ನೀರು ಬಿಡಲು ಒಪ್ಪಿಕೊಂಡ ಮೇಲೆಯೇ ವಕೀಲರಾದ ಪಾಲಿ ನಾರಿಮನ್ ಅವರು ಸೆ.7ರಿಂದ 12ರವರೆಗೆ ಪ್ರತಿ ದಿನ 10 ಟಿಎಂಸಿ ನೀರು ಬಿಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಹೀಗಾಗಿ ನ್ಯಾಯಾಲಯ ಎರಡು ಕಡೆ ವಾದ ಆಲಿಸಿ 15 ಟಿಎಂಸಿ ನೀರು ಬಿಡಲು ಆದೇಶ ನೀಡಿತು. ವಾಸ್ತವ ಸ್ಥಿತಿಗತಿ ಅರಿಯದೆ ರಾಜ್ಯ ಸರ್ಕಾರ ನೀರು ಬಿಡಲು ಏಕೆ ಒಪ್ಪಿಕೊಂಡಿತು ಎಂದು ಪ್ರಶ್ನಿಸಿದರು.
ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ವಕೀಲರು ಸ್ವಯಂ ಪ್ರೇರಣೆಯಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾದ ವೇಳೆ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ ಕಾನೂನು ತಜ್ಞರು, ವಕೀಲರ ಜತೆ ಚರ್ಚಿಸಿ ರಾಜ್ಯಕ್ಕೆ ಅನುಕೂಲವಾಗುವಂತಹ ತೀರ್ಮಾನವನ್ನು ಕೈಗೊಂಡಿದ್ದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲೂ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ನೀರು ಬಿಡಬಾರದೆಂದು ಖಡಾಖಂಡಿತವಾಗಿ ಹೇಳಿ ಬಂದಿದ್ದೆವು.
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲೂ ಸರ್ಕಾರ ತನ್ನ ಹಠಮಾರಿ ಧೋರಣೆ ಕೈ ಬಿಡದ ಪರಿಣಾಮ ನಮಗೆ ತೀವ್ರ ಹಿನ್ನಡೆಯಾಯಿತು. ನ್ಯಾಯಾಧೀಕರಣವೇ ಮೂರು ರಾಜ್ಯದ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ಎಂದು ಹೇಳಿದೆ.
ಈವರೆಗೂ ಸಿದ್ದರಾಮಯ್ಯನವರು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿಲ್ಲ. ಇದು ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಪ್ರತಿಯೊಂದಕ್ಕೂ ಪ್ರತಿಪಕ್ಷಗಳನ್ನು ಟೀಕಿಸುವುದು ಬಿಟ್ಟು ಮೊದಲು ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನಾವೆಲ್ಲರೂ ರಾಜಕೀಯ ಹಿತಾಸಕ್ತಿಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಸಾಧ್ಯವಾದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ಸಿಎಂ ಸಿದ್ಧರಾದರೆ ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
► Follow us on – Facebook / Twitter / Google+