ಬಂದ್ ಕೈಬಿಡಿ : ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DKShivakumar-01

ಬೆಂಗಳೂರು, ಸೆ.8- ಕಾವೇರಿ ವಿಚಾರದಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ ಸಂಕಷ್ಟ ಪರಿಸ್ಥಿತಿ ನಿರ್ವಹಣೆ ಹಿನ್ನೆಲೆಯಲ್ಲಿ ಸರ್ಕಾರ ಮಂಡ್ಯ ರೈತರಿಗೆ ನೀರು ಕೊಡಲು ಸಮ್ಮತಿಸಿ ಕಾಲುವೆಗಳಿಗೆ ಇಂದು ಬೆಳಗ್ಗಿನಿಂದಲೇ ನೀರು ಹರಿಸುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಒಗ್ಗಟ್ಟು ಪ್ರದರ್ಶಿಸ ಬೇಕಿದ್ದು, ನಾಳೆ ನಡೆಯಲಿರುವ ಬಂದ್ ಕೈ ಬಿಟ್ಟು ಎಲ್ಲರೂ ಸಹಕರಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಈಗಾಗಲೇ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರು ಪ್ರತಿಭಟನೆ ಕೈ ಬಿಡಲು ಒಪ್ಪಿದ್ದಾರೆ.

ಪ್ರತಿಭಟನೆಯಿಂದಾಗಿ ಸಾಕಷ್ಟು ಅನಾಹುತಗಳಾಗುತ್ತಿವೆ. ನಮಗೆ ರೈತರ ಹಿತರಕ್ಷಣೆ ಮುಖ್ಯ. ಅವರ ಬೆಳೆ ಉಳಿಸಿಕೊಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಅವರ ಬೆಳೆಗಳಿಗೆ ಕಾಲುವೆಗಳ ಮೂಲಕ ಇಂದು ಬೆಳಗ್ಗೆಯಿಂದ ನೀರು ಹರಿಸಲಾಗುತ್ತಿದೆ ಎಂದರು. ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾರಣಕ್ಕೆ ನಮ್ಮ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ. ಉಗ್ರ ಪ್ರತಿಭಟನೆಯಿಂದ ನಷ್ಟವೇ ಹೊರತು, ಲಾಭವೇನಿಲ್ಲ. ಈಗಾಗಲೇ ಎರಡು ದಿನಗಳಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಂದಿನಿಂದ ಶಾಲೆ ಆರಂಭವಾಗಿದೆ. ಇನ್ನು ಮುಂದೆ ಇದಕ್ಕೆ ಆಸ್ಪದ ನೀಡಬೇಡಿ ಎಂದು ಹೇಳಿದರು.

ಎಲ್ಲಾ ಪಕ್ಷಗಳು ಯಾವುದೇ ರಾಜಕೀಯ ಮಾಡದೆ ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಈ ಮೊದಲೂ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಇನ್ನು ಮುಂದೆಯೂ ಅದು ಅತ್ಯಗತ್ಯ ಎಂದ ಅವರು, ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ನಾಳಿನ ಬಂದ್ ಅನಗತ್ಯ ಎಂದು ತಿಳಿಸಿದರು. ರೈತರ ಬೆಳೆಗಳಿಗೂ ಕೆಆರ್‍ಎಸ್‍ನಿಂದ ನೀರು ಹರಿಸಲಾಗುತ್ತಿದೆ. ಡೆಡ್ ಸ್ಟೋರೆಜ್ ಸಹ ಖಾಲಿ ಆಗುವ ಆತಂಕವಿದೆ. ಆದರೆ, ಕುಡಿಯುವ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿ ಆಧರಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.

ಪೂರ್ಣ ಪ್ರಮಾಣದಲ್ಲಿ ನೀರು ಬಿಡುವ ಆದೇಶ ಪಾಲನೆ ಮಾಡುವುದು ಕಷ್ಟವಾಗುತ್ತದೆ. ಪರಿಷ್ಕøತ ಆದೇಶಕ್ಕಾಗಿ ಸುಪ್ರೀಂಕೋರ್ಟ್‍ಗೆ ಮನವಿ ಮಾಡಲಾಗುವುದು. ಕಾವೇರಿ ನೀರಿನ ವಿಷಯವಾಗಿ ನದಿಪಾತ್ರದ ಜನರ ನೀರಾವರಿ ಸಲಹಾ ಸಮಿತಿ ಸಭೆಯನ್ನು ಸೆ.10ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದಿನಿಂದಲೇ ಮಂಡ್ಯ ರೈತರಿಗೆ ನೀರು ಬಿಡಲಾಗುತ್ತಿದೆ ಎಂದು ವಿವರಿಸಿದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin