ಪಾಂಡವಪುರದಲ್ಲಿ ವಿನೂತನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

pandavapura

ಪಾಂಡವಪುರ, ಸೆ.10- ಕಾವೇರಿ ನದಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್‍ಗೆ ಪಾಂಡವಪುರ ತಾಲ್ಲೂಕಿನಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.ಪಟ್ಟಣದ ಐದು ದೀಪದ ವೃತ್ತದಲ್ಲಿ, ಕೆ.ಎಸ್.ಆರ್.ಟಿ.ಸಿ. ಡಿಪೋ , ಹರಳಹಳ್ಳಿ, ಕೆ.ಬೆಟ್ಟಹಳ್ಳಿ, ಹಿರೀಮರಳಿ ಸರ್ಕಲ್ ಮುಂತಾದ ಕಡೆ ಪ್ರತಿಭಟನಾಕಾರರು ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದರು. ಅಲ್ಲದೆ ರಸ್ತೆಗಳಲ್ಲಿ ಫುಟ್‍ಬಾಲ್, ಕೇರಂ ಆಟಗಳನ್ನಾಡಿ ವಿನೂತನವಾಗಿ ಪ್ರತಿಭಟಿಸಿದರು.

ಉಳಿದಂತೆ ತಾಲ್ಲೂಕಿನ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ, ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್ ಸೇರಿದಂತೆ ಹಾಲು ಮತ್ತು ಹಣ್ಣಿನ ಮಾರಾಟಗಾರರೂ ಸಹಾ ಸ್ವಯಂ ಪ್ರೇರಿತರಾಗಿ ತಮ್ಮ ವ್ಯವಹಾರ ನಿಲ್ಲಿಸಿ ಬಂದ್‍ನಲ್ಲಿ ಭಾಗವಹಿಸಿದರು. ಎಲ್ಲೆಡೆ ತೆಂಗಿನ ಮರದ ದಿಮ್ಮಿಗಳನ್ನು, ಕಲ್ಲುಗಳನ್ನು, ಚಪ್ಪಡಿಗಳನ್ನು ರಸ್ತೆಗೆ ಅಡ್ಡಲಾಗಿಟ್ಟು, ಟೈರುಗಳನ್ನು ಸುಟ್ಟು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಡಾ.ರಾಜ್ ಕುಮಾರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು, ಕ್ರಿಶ್ಚಿಯನ್ ಸಮುದಾಯ, ಸವಿತಾ ಸಮಾಜ, ವಿಶ್ವಕರ್ಮ ಸಮಾಜ, ಛಾಯಾಗ್ರಾಹಕರ ಒಕ್ಕೂಟ, ಪತ್ರಕರ್ತರ ಸಂಘ, ಮೆಡಿಕಲ್ ಸ್ಟೋರ್ ಮಾಲಿಕರ ಸಂಘ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

ಮುಸ್ಲೀಮರಿಂದ ಮಳೆಗಾಗಿ ಪ್ರಾರ್ಥನೆ:

ಪಟ್ಟಣದ ನಾಲ್ಕು ಮಸೀದಿಗಳಲ್ಲಿ ನಾಡಿನ ಸುಭೀಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೇ ಸಾವಿರಾರು ಮುಸಲ್ಮಾನರು ಪ್ರಾರ್ಥನೆ ಮುಗಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಜಿಪಂ ಸದಸ್ಯರಾದ ತಿಮ್ಮೇಗೌಡ, ಅಶೋಕ, ಮಸೀದಿ ಮುಖ್ಯಸ್ಥ ಮೊಹಮ್ಮದ್ ಹನೀಫ್, ಮುಖಂಡರಾದ ನಜೀರ್ ಅಹಮದ್, ಸಮಿಯುಲ್ಲಾ, ಇಲಿಯಾಸ್ ಜಾನ್, ಮುಮ್ತಾಜ್, ಶೌಕತ್, ಬಿಜೆಪಿ ಮುಖಂಡರಾದ ಕುಮಾರಸ್ವಾಮಿ, ಮಂಜುನಾಥ್, ಸವಿತಾ ಸಮಾಜದ ರವೀಂದ್ರ ಕುಮಾರ್ ಭಾಗವಹಿಸಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin