ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಗಳು ನೆಪಮಾತ್ರಕ್ಕೆ ಸೀಮಿತವಾಗದಿರಲಿ (ಲೇಖನ )

ಈ ಸುದ್ದಿಯನ್ನು ಶೇರ್ ಮಾಡಿ

suicide
ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೂ ಆತ್ಮಹತ್ಯೆ ಹಾಗೂ ಆತ್ಮಹತ್ಯೆಗೆ ಯತ್ನದಂತಹ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಇದು ನಿಜಕ್ಕೂ ದುರಂತ.ನೆಪಮಾತ್ರಕ್ಕೆ ಇಂತಹ ದಿನಾಚರಣೆ ಮಾಡದೆ ನಿಜಕ್ಕೂ ಆತ್ಮಹತ್ಯೆ ತಡೆಯುವಂತಾಗಬೇಕು. ಆತ್ಮಹತ್ಯೆಗೆ ಯತ್ನಿಸುವ ಯುವ ಮನಸುಗಳಿಗೆ ಸಾಂತ್ವನ ಹೇಳಬೇಕು.ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಪ್ರತಿ ವರ್ಷ ಸೆಪ್ಟೆಂಬರ್ 10ರಂದು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಸಂಘ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಒಂದು ಘೋಷಣೆ ಮಾಡುತ್ತದೆ. ಈ ವರ್ಷ ಘೋಷಣೆ Connect, Communicate and Care ಅಂದರೆ ಸಂಪರ್ಕ, ಸಂವಹನ ಮತ್ತು ಆರೈಕೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ (ಪ್ರತಿ 40 ಸೆಕೆಂಡಿಗೆ ಒಬ್ಬರು) ಯುವ ಪೀಳಿಗೆಯಲ್ಲಿ ಇದು ಸಾವಿಗೆ 3ನೆ ಕಾರಣ. ಯುದ್ಧ ಮತ್ತು ನರಹತ್ಯೆಗಿಂತ ಹೆಚ್ಚು ಜನ ಆತ್ಮಹತ್ಯೆಯಿಂದ ಮರಣ ಹೊಂದುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. 2014ನೆ ಇಸವಿಯಲ್ಲಿ ನಮ್ಮ ರಾಜ್ಯದಲ್ಲಿ 10,945 ಮಂದಿ ಆತ್ಮಹತ್ಯೆಯಿಂದ ಮರಣ ಹೊಂದಿದ್ದಾರೆ.ಆತ್ಮಹತ್ಯೆಗಿಂತ, ಆತ್ಮಹತ್ಯೆ ಪ್ರಯತ್ನ 25ರಷ್ಟು ಹೆಚ್ಚಾಗುತ್ತಿದೆ. ದುರಂತ ಎಂದರೆ ಸಮುದಾಯದಲ್ಲಿ ಬಹಳ ಕುಟುಂಬಗಳು ಆತ್ಮಹತ್ಯೆ ಪ್ರಕರಣಗಳಿಂದ ಶೋಕ ಪಡುತ್ತಿವೆ. ಆತ್ಮಹತ್ಯೆ ತಡೆಗಟ್ಟುವ ಸಾಧ್ಯತೆ ಇದ್ದರೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ವಿಪರ್ಯಾಸ.

ಆತ್ಮಹತ್ಯೆ ಪ್ರಕರಣಗಳನ್ನು ಇತರೆ ಆರೋಗ್ಯ ಸಮಸ್ಯೆಗಳಂತೆ ಚರ್ಚಿಸಿ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಕಳಂಕವನ್ನು ಹೊಡೆದೋಡಿಸಿ, ಆತ್ಮಹತ್ಯೆ ಯೋಚನೆಗಳಿಂದ ನೊಂದವರು, ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರು, ಆತ್ಮಹತ್ಯೆ ಪ್ರಕರಣಗಳಿಂದ ಶೋಷಿತರು, ಅತೀವ ದುಃಖದಿಂದ ಕೂಡಿರುತ್ತಾರೆ. ಅವರೊಡನೆ ಸಂಪರ್ಕದಿಂದ ಇರುವುದು, ಅವರಿಗೆ ಬೆಂಬಲ ನೀಡುವುದು ಬಹಳ ಮುಖ್ಯವಾದುದು. ಆತ್ಮಹತ್ಯೆಗೆ ಮೊರೆ ಹೋಗುವ ಅಪಾಯದಂಚಿನಲ್ಲಿರುವವರ ಕಡೆಗೆ ಉತ್ತಮ ಸಂವಹನ ಇಟ್ಟುಕೊಳ್ಳುವುದರಿಂದ ಇದನ್ನು ತಡೆಯಲು ಸಾಧ್ಯ.
ಆತ್ಮಹತ್ಯೆ ಯೋಚನೆಯುಳ್ಳ ಪ್ರತಿಯೊಬ್ಬರೂ ಆತ್ಮಹತ್ಯೆ ಬಗ್ಗೆ ಕುರುಹು ನೀಡುತ್ತಾರೆ. ಪ್ರಾರಂಭಿಕ ಹಂತದಲ್ಲಿ ಗುರುತಿಸುವುದರಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ.

ವಿಶ್ವದಾದ್ಯಂತ ಎಲ್ಲರೂ ಆತ್ಮಹತ್ಯೆ ತಡೆಗಟ್ಟುವ ಗುರಿಯೊಂದಿಗೆ ಒಂದಾಗಿ ಕೆಲಸ ಮಾಡೋಣ. ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಿ ನಿಮ್ಮ ಸುತ್ತಮುತ್ತಲಿನ ಕಷ್ಟದಲ್ಲಿರುವವರ ಭಾವನೆಗಳಿಗೆ ಸ್ಪಂದಿಸಿ, ನಿಮ್ಮ ಒಂದು ನಡೆ, ಸಂವೇದನಾಶೀಲವುಳ್ಳ ನುಡಿ ಒಬ್ಬರ ಜೀವನ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಮನದಲ್ಲಿ ಇಟ್ಟುಕೊಂಡು ನೆರವಾಗಿ.ಆರೋಗ್ಯ ಸಹಾಯವಾಣಿ 104ರಲ್ಲಿ ಆಪ್ತ ಸಮಾಲೋಚನೆ ಲಭ್ಯವಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮನೋ ವೈದ್ಯಕೀಯ ಸೌಲಭ್ಯವಿದೆ. ಇದನ್ನು ಅಗತ್ಯವಿರುವವರು ಬಳಸಿಕೊಳ್ಳಬಹುದಾಗಿದೆ.
ಆತ್ಮಹತ್ಯೆ ಮಹಾಪಾಪ. ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಶಾಲಾ ಮಕ್ಕಳು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿದ್ದು, ಇಂತಹ ವಿಷಯಗಳು ಬಂದಾಗ ಆಘಾತವಾಗುತ್ತದೆ.

ಎಳೆ ವಯಸ್ಸಿನಲ್ಲಿ ಆತ್ಮಹತ್ಯೆಯಂತಹ ಯೋಚನೆ ಬರುವುದಾದರೂ ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡತೊಡಗಿದೆ.ಸರ್ಕಾರ, ಎನ್‍ಜಿಒಗಳು ಹಾಗೂ ಸುತ್ತಮುತ್ತಲಿನ ಜನರು ಖಿನ್ನತೆಗೊಳಗಾಗಿರುವವರನ್ನು ಗುರುತಿಸಿ ಅವರಿಗೆ ಸಾಂತ್ವನ ಹೇಳಿ ಅವರ ಮನಸ್ಸನ್ನು ಸದೃಢಗೊಳಿಸುವ ಅಗತ್ಯವಿದೆ.ಮಕ್ಕಳಾಗಲಿ, ದೊಡ್ಡವರಾಗಲಿ ಖಿನ್ನತೆಗೊಳಗಾಗಿದ್ದರೆ ಅಥವಾ ಯಾವುದಾದರೂ ಸಮಸ್ಯೆಗೆ ಒಳಗಾಗಿದ್ದರೆ ಅಂತಹವರಿಗೆ ಕೌನ್ಸಿಲಿಂಗ್ ಕೊಟ್ಟು ಅವರ ಮನಸ್ಸನ್ನು ತಿಳಿಗೊಳಿಸಿ ಆತ್ಮಹತ್ಯೆಯಂತಹ ಯೋಚನೆಯಿಂದ ಹೊರಬರುವಂತೆ ಮಾಡಬೇಕಿದೆ.ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದಲ್ಲಷ್ಟೆ ಅಲ್ಲ, ಎಲ್ಲ ಸಮಯದಲ್ಲೂ ಇಂತಹ ಕೆಲಸಗಳನ್ನು ಪ್ರಜ್ಞಾವಂತ ನಾಗರಿಕರು ಮಾಡಬೇಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin