ನೆರವಿನ ನಿರೀಕ್ಷೆಯಲ್ಲಿದೆ ಕಾವೇರಿ ಗಲಾಟೆಯಲ್ಲಿ ಗುಂಡೇಟು ತಿಂದ ಗಾಯಾಳು ಸಿಂಗ್ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

fIRING

ಬೆಂಗಳೂರು,ಸೆ.14-ಕಾವೇರಿ ಪ್ರತಿಭಟನೆ ಭುಗಿಲೆದ್ದ ಸಂದರ್ಭ ಹೆಗ್ಗನಹಳ್ಳಿ ಕ್ರಾಸ್‍ನಲ್ಲಿ ನಡೆದ ಫೈರಿಂಗ್ ವೇಳೆ ಒಬ್ಬರು ಗುಂಡಿಗೆ ಬಲಿಯಾಗಿ ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಎದೆಯಲ್ಲಿ ಗುಂಡು ಹೊಕ್ಕಿದ್ದ ಉಮೇಶ್ ಎಂಬ ಯುವಕ ಆ ದಿನ ರಾತ್ರಿಯೇ ಕೊನೆಯುಸಿರೆಳೆದ ನಂತರ ಅವರ ಕುಟುಂಬಕ್ಕೆ ಸರ್ಕಾರವು ಸೇರಿದಂತೆ ಹಲವು ಖಾಸಗಿ ವ್ಯಕ್ತಿಗಳು, ಸಂಘಸಂಸ್ಥೆಗಳು ಧಾರಾಳವಾಗಿ ನೆರವು ನೀಡಿದ್ದು, ತುಂಬ ಸಂತೋಷದ ವಿಷಯ.   ದುಡಿಯುವ ಆಧಾರಸ್ತಂಭದಂತಿದ್ದ ಮಗ ಮತ್ತು ಪತಿಯನ್ನು ಕಳೆದುಕೊಂಡು ಅನಾಥವಾದ ಕುಟುಂಬಕ್ಕೆ ಈ ನೆರವು ಜೀವನದ ಮಾರ್ಗ ತೋರಿಸುತ್ತದೆ ಮತ್ತು ಅವರ ಮನೆತನದ ಬದುಕಿಗೆ ಆಧಾರವಾಗುತ್ತದೆ.

ಆದರೆ ಅದೇ ದಿನ ರಾತ್ರಿ ಇನ್ನೊಬ್ಬ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದರು. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಈ ಗಾಯಾಳು ಬಗ್ಗೆ ಅದೇಕೋ ಕನಿಕರ ತೋರಿಸಿಲ್ಲ ಎಂಬುದು ವಿಷಾದದ ವಿಷಯ. ಕನಿಷ್ಠ ಗಾಯಾಳುವಿನ ಚಿಕಿತ್ಸೆಯ ಬಗ್ಗೆಯಾದರೂ ಜಿಲ್ಲಾಡಳಿತ ಚಿಂತಿಸಬೇಕಾಗಿತ್ತು.  ಗಾಯಾಳು ಚಂದ್ರಮೋಹನ್ ಸಿಂಗ್ ತೊಡೆಯಲ್ಲಿ ಗುಂಡು ಹೊಕ್ಕಿದ್ದು ಅದನ್ನು ನಿನ್ನೆ ರಾತ್ರಿಯಷ್ಟೇ ಹೊರ ತೆಗೆಯಲಾಗಿದೆ. ಗುಂಡೇಟಿಗೆ ಜರ್ಝರಿತರಾಗಿರುವ ಸಿಂಗ್ ಪ್ರಸ್ತುತ ಮಾಗಡಿರಸ್ತೆ,ಸುಂಕದ ಕಟ್ಟೆಯಲ್ಲಿರುವ ಶ್ರೀ ಲಕ್ಷ್ಮಿ ಮಲ್ಟಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿದ್ದಾನೆ. ಈ ಮನುಷ್ಯ ಸಂಪೂರ್ಣವಾಗಿ ಚೇತರಿಸಿಕೊಂಡು ಕೆಲಸಕ್ಕೆ ಹೋಗಲು ಇನ್ನು ಮೂರು ತಿಂಗಳಾದರೂ ಬೇಕು. ಅಲ್ಲಿಯವರೆಗೆ ಅವನ ಕುಟುಂಬದ ಗತಿಯೇನು ಮತ್ತು ಅವನ ಆಸ್ಪತ್ರೆ ವೆಚ್ಚ ಹೇಗೆ ನಡೆಯಬೇಕು.

ಸಿಂಗ್ ಗುಂಡೇಟಿನಿಂದ ಆಸ್ಪತ್ರೆ ಸೇರಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ಈಗ ಕಂಗಾಲಾಗಿ ಹೋಗಿದೆ. ಅವನ ಅಣ್ಣ ಸುರೇಂದ್ರ ಸಿಂಗ್ ಸದ್ಯ ತಮ್ಮನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾನೆ. ಸದ್ಯಕ್ಕೆ ಕೆಲವು ಸ್ಥಳೀಯರು ಚಿಕಿತ್ಸೆಗೆ ನೆರವು ನೀಡುತ್ತಿದ್ದಾರೆ.  ಆದರೆ ಸರ್ಕಾರ ಮೃತ ಉಮೇಶ್ ಮತ್ತು ಮಹಡಿ ಮೇಲಿಂದ ಬಿದ್ದು ಜೀವ ಕಳೆದುಕೊಂಡ ಕುಮಾರ್ ಎಂಬುವರಿಗೆ ಧಾರಾಳ ಪರಿಹಾರ ನೀಡಿದೆ. ಆದರೆ ಈ ಗಾಯಾಳು ಚಂದ್ರಮೋಹನ್ ಸಿಂಗ್ ಅವರ ಬಗ್ಗೆ ಯಾವುದೇ ಕಾಳಜಿ ವಹಿಸದಿರುವುದು ದುರದೃಷ್ಟಕರ.  ಈಗಲಾದರೂ ಸರ್ಕಾರ ಈ ಕಡೆ ಗಮನಹರಿಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಮೋಹನ್ ಸಿಂಗ್‍ಗೆ ಕನಿಷ್ಟ ನೆರವನ್ನಾದರೂ ನೀಡಬೇಕು ಎಂಬುದು ಅವರ ಸಹೋದರ ಸುರೇಂದ್ರ ಸಿಂಗ್ ಮತ್ತು ಸಾರ್ವಜನಿಕರ ಆಗ್ರಹವಾಗಿದೆ.

ಯಾರು ಈ ಗಾಯಾಳು:

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಿವಾಸಿ ಚಂದ್ರಮೋಹನ್ ಸಿಂಗ್(29). ಪೀಣ್ಯ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಔಷಧಿ ಕಾರ್ಖಾನೆಯೊಂದರಲ್ಲಿ ನೌಕರ.
ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಕಾವೇರಿ ಗಲಾಟೆ ಉಲ್ಬಣಿಸಿದ್ದು , ಕ್ಷಿಪ್ರ ಕಾರ್ಯಾಚರಣೆ ಪಡೆ ಗುಂಡು ಹಾರಿಸಿತ್ತು. ಆ ಗುಂಡು ಉಮೇಶ್‍ನನ್ನು ಬಲಿ ತೆಗೆದುಕೊಂಡರೆ ಸಿಂಗ್‍ನ ಕಾಲನ್ನು ಬಲಿ ತೆಗೆದುಕೊಂಡಿದೆ.  ಈಗ ಅವರ ಕುಟುಂಬ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ತಲೆಮೇಲೆ ಕೈ ಹೊತ್ತು ಕುಳಿತಿದೆ. ಸರ್ಕಾರ ನಮ್ಮ ಕೃಪಾ ದೃಷ್ಟಿ ಬೀರೀತೇ, ನೆರವಿನ ಹಸ್ತ ಚಾಚಿತೇ ಎಂದು ಕಾಯುತ್ತಿದ್ದಾರೆ. ಸರ್ಕಾರ ತಕ್ಷಣ ಗಮನಹರಿಸಿ ಚಂದ್ರಮೋಹನ್ ಸಿಂಗ್‍ಗೆ ನೆರವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.  ಇಂದು ಬೆಳಗ್ಗೆ ಗಲಭೆ ನಡೆದ ಹೆಗ್ಗನಹಳ್ಳಿ ಕ್ರಾಸ್‍ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗಲೂ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರೂ ಇಲ್ಲವೋ ಗೊತ್ತಿಲ್ಲ ಎಂದು ಕುಟುಂಬದವರು ಗೋಳಾಡುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin