ಸುಪ್ರೀಂಕೋರ್ಟ್’ಗೆ ಹೋಗುವ ಮೊದಲೇ ಪ್ರಧಾನಿಯವರನ್ನು ಏಕೆ ಕೇಳಿಲ್ಲ : ಶೋಭಾ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Shobha

ಚಿಕ್ಕಮಗಳೂರು,ಸೆ.14- ಕಾವೇರಿ ವಿಚಾರವನ್ನು ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಅಂಗಳಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಮುಂಚೆ ಪ್ರಧಾನಿಯವರನ್ನು ಏಕೆ ಕೇಳಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಈಗ ಒತ್ತಾಯಿಸುತ್ತಿದ್ದಾರೆ. ಮೊದಲೇ ಈ ವಿಚಾರವನ್ನು ಮೋದಿ ಗಮನಕ್ಕೆ ಏಕೆ ತರಲಿಲ್ಲ. ಕೋರ್ಟ್ ತೀರ್ಪು ಬಂದ ನಂತರ ಈಗ ಮೋದಿ ತಲೆಗೆ ಕಟ್ಟಲು ಹೊರಟಿದ್ದಾರೆ ಎಂದು ಟೀಕಿಸಿದರು.

ಮಹದಾಯಿ ಹಾಗೂ ಕಾವೇರಿ ನದಿ ನೀರು ಹಂಚಿಕೆಯನ್ನು ನ್ಯಾಯಾಧೀಕರಣದ ಮುಂದೆ ತೆಗೆದುಕೊಂಡು ಹೋಗಿದ್ದು ಕಾಂಗ್ರೆಸ್‍ನವರೇ ಹೊರತು ಬಿಜೆಪಿ ಅಲ್ಲ ಎಂದರು.   ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಇಲಾಖೆ ಕುರಿತು ಸರಿಯಾದ ಮಾಹಿತಿ ಇಲ್ಲ. ಕೇವಲ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಲೇವಡಿ ಮಾಡಿದರು.  ರಾಜ್ಯದಲ್ಲಿ ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್ ಹೇಗೆ ಎಡವುತಿದೆಯೋ ಹಾಗೆ ಸುಪ್ರೀಂಕೋರ್ಟ್‍ನಲ್ಲೂ ಎಡವುತ್ತಿದೆ. ಯಾವ ಅಫಿಡೆವಿಟ್‍ನನ್ನು ವಕೀಲರು ಹಾಕಿದ್ದಾರೆ. ಅದರಲ್ಲಿ ಏನು ಇದೆ ಎಂಬ ಮಾಹಿತಿಯೇ ಸರ್ಕಾರಕ್ಕೆ ಇಲ್ಲ ಎಂದರು.

ವಕೀಲ ನಾರಿಮನ್ 10 ಕ್ಯೂಸೆಕ್ ನೀರು ಬಿಡಲು ಒಪ್ಪಿದ್ದರು ಎಂಬ ವಿಚಾರ ಮುಖ್ಯಮಂತ್ರಿ ಅವರಿಗೆ ಗೊತ್ತಿಲ್ಲ. ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಹಾಕುವಾಗ ಕೃಷಿ ಮತ್ತು ಕುಡಿಯುವ ನೀರು ಎಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ನೀರಿನ ಅಭಾವವನ್ನು ಕೋರ್ಟ್‍ಗೆ ಮನವರಿಕೆ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.   ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿಗಳು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ತೀರ್ಮಾನ ಕೈಗೊಂಡಲ್ಲಿ ನಾವೆಲ್ಲರೂ ಅವರ ಜೊತೆ ಕೈ ಜೋಡಿಸಿ ಜೈಲಿಗೆ ಹೋದರೆ ನಾವೂ ಹೋಗಲು ಸಿದ್ದ. ರಾಜ್ಯದ ನೆಲ, ಜಲ ವಿಚಾರದಲ್ಲಿ ಪಕ್ಷಪಾತ ಮರೆತು ಕೈ ಜೋಡಿಸಲು ಸಿದ್ದ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin