ಡಿ.ಕೆ ಸೋದರರಿಂದ ಜೀವಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Dk-brothrs

ಬೆಂಗಳೂರು, ಸೆ.16- ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ರಾಮನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಸೇರಿ ನನ್ನನ್ನು ಬಾಡಿಗೆ ಹಂತಕರಿಂದ ಕೊಲ್ಲಿಸುವ ಪ್ರಯತ್ನ ನಡೆಸಿದ್ದು, ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಆರ್‍ಟಿಐ ಹಾಗೂ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕನಕಪುರ ತಾಲೂಕಿನಲ್ಲಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದು, ಅದು ಇವರಿಗೆ ಕಾನೂನಿನ ತೊಡಕಾಗುವ ಸಂಭವವಿರುವುದರಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ನಾನು ಹೋರಾಟಗಾರನಾಗಿ ಸರ್ಕಾರದ ಹಂತದಲ್ಲಿ ತಪ್ಪುಗಳನ್ನು ಹುಡುಕಿ ತೆಗೆದು ಮಾಧ್ಯಮಗಳ ಮೂಲಕ ತೋರಿಸಿ ಹೋರಾಟ ಮಾಡುತ್ತಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ. ನನ್ನ ಪ್ರಾಣಕ್ಕೆ ಏನಾದರೂ ತೊಂದರೆಯಾದರೆ ಮತ್ತು ಹಾನಿ ಉಂಟಾದರೆ ಈ ಮೂವರೇ ನೇರ ಕಾರಣರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಕನಕಪುರದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ನಾನು ಮಾಡುವ ಹೋರಾಟವನ್ನು ಕಾನೂನು ಮೂಲಕ ಬಗೆಹರಿಸಬೇಕೇ ಹೊರತು ಸಮಾಜಘಾತುಕ ಕೃತ್ಯಗಳಿಂದಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಇಕ್ಬಾಲ್ ಹುಸೇನ್ ಅವರು ಕ್ರಿಮಿನಲ್ ಒಳಸಂಚು ರೂಪಿಸಿ ಕುಮ್ಮಕ್ಕು ನೀಡಿ ನನ್ನ ಹತ್ಯೆಗೆ ಯತ್ನ ನಡೆಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ದೂರು ಸಂಬಂಧದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಅವರು ಬಿಡುಗಡೆ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin