ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

kannada-seve

ತುಮಕೂರು, ಸೆ.17-ಕಾವೇರಿ ವಿವಾದವನ್ನೇ ನೆಪ ಮಾಡಿಕೊಂಡು ತಮಿಳುನಾಡಿನ ವಿವಿಧೆಡೆಗಳಲ್ಲಿ ನೆಲೆಸಿರುವ ಹಾಗೂ ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಕನ್ನಡಸೇನೆ, ದಸಂಸ, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ತೋಳಿಗೆ ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರಾಳ ದಿನ ಆಚರಿಸಿದರು.ಈ ವೇಳೆ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್,ಕಾವೇರಿ ವಿವಾದವನ್ನೇ ನೆಪ ಮಾಡಿಕೊಂಡು ಊಟಿ ಮತ್ತಿತರರ ಕಡೆಗಳಲ್ಲಿ ನೆಲೆಸಿರುವ ಮತ್ತು ಪ್ರವಾಸಕ್ಕೆ ಕರ್ನಾಟಕದಿಂದ ತೆರಳಿರುವ ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ತಮಿಳುನಾಡು ಸರಕಾರ ಅಲ್ಲಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆಗೆ ನೀಡಿ ಅವರ ಪ್ರಾಣ,ಮಾನ ಮತ್ತು ಆಸ್ತಿಪಾಸ್ತಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾವೇರಿ ಗಲಾಟೆ ನಡೆಯುತ್ತಿದ್ದ ವೇಳೆ ಜಿಲ್ಲೆಗೆ ಬಂದ ತಮಿಳುನಾಡಿನ ಲಾರಿಗಳಿಗೆ ಕನ್ನಡಸೇನೆಯೇ ರಕ್ಷಣೆ ನೀಡಿ ಆಂಧ್ರದ ಗಡಿಯವರೆಗೆ ಬಿಟ್ಟು ಬಂದಿವೆ.ಅಲ್ಲದೆ ಅವರಿಗೆ ಊಟ, ತಿಂಡಿ, ಕುಡಿಯಲು ನೀರು ನೀಡಿ ಸತ್ಕರಿಸಲಾಗಿದೆ.ಆದರೆ ಇದಕ್ಕೆ ತದ್ವಿರುದ್ದವಾದ ಧೋರಣೆ ತಮಿಳುನಾಡಿನಲ್ಲಿ ಕಂಡುಬರುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.ತಮಿಳುನಾಡಿನಲ್ಲಿ ನೆಲ,ಜಲದ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ.ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ನೂರಾರು ಕೇಸುಗಳನ್ನು ಕನ್ನಡಿಗರ ಮೇಲೆ ಹಾಕಲಾಗಿದೆ.ಇದು ತಪ್ಪಬೇಕು ಎಂದರು.

ಕನ್ನಡಸೇನೆಯ ಧನಿಯಾಕುಮಾರ್,ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಹತ್ತಾರು ಕಾರ್ಯಕರ್ತರು ಕರಾಳ ದಿನ ಆಚರಿಸಿ ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಸಲ್ಲಿಸಿದರು.ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ, ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ಏನಾದರೂ ತೊಂದರೆಗೆ ಸಿಲುಕಿದ್ದರೆ ಕೂಡಲೇ ತಮ್ಮ ಗಮನಕ್ಕೆ ತಂದರೆ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು.ದಸಂಸ ಜಿಲ್ಲಾ ಯುವಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್, ಕನ್ನಡಸೇನೆಯ ವೆಂಕಟಾಚಲ,ಸವಿತಾ ಸಮಾಜದ ಮಂಜೇಶ್, ವಿನಯಜೈನ್, ಶಬ್ಬೀರ್ ಅಹಮದ್,ಮುಕ್ದುಬ್, ಮಹಮದ್ ರಫೀಕ್ ಬಾಬು,ಷಣ್ಮುಗಂ, ಚಂದ್ರಬಾಬು, ಮಂಜಮ್ಮ, ಲಕ್ಷ್ಮಿ, ಗಗನ, ಗಂಗಮ್ಮ ಸ್ಭೆರಿದಂತೆ ಹಲವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin