ದೆಹಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda
ಬೆಂಗಳೂರು,ಸೆ.19- ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಹರಿಯುತ್ತಿರುವ ನೀರನ್ನು ನಿಲ್ಲಿಸಲು ಎಲ್ಲಾ ಪಕ್ಷಗಳ ರಾಜಕಾರಣಿಗಳು ಒಳಸಂಧಾನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೆಹಲಿಗೆ ತೆರಳಿದ್ದಾರೆ. ಇಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ನಾಳೆ ಮತ್ತೆ ಸುಪ್ರೀಂಕೋರ್ಟ್ ಮುಂದೆ ವಿಚಾರಣೆ ನಡೆಯಲಿದೆ. ಸೆ.5ರಂದು ಸುಪ್ರೀಂಕೋರ್ಟ್ ತಮಿಳುನಾಡಿಗೆ 10 ದಿನಗಳ ಕಾಲ 15,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ನಂತರ ಸೆ.12 ರಂದು ತೀರ್ಪನ್ನು ಪರಿಷ್ಕರಿಸಿದ ನ್ಯಾಯಾಲಯ ಮತ್ತೆ ಸೆ.20 ರವರೆಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರನ್ನು ಹರಿಸುವಂತೆ ತೀರ್ಪು ನೀಡಿತ್ತು. ತೀರ್ಪಿನ ಪರಿಣಾಮ ರಾಜ್ಯದಲ್ಲಿ ಉಂಟಾದ ಗಲಭೆ ಹಾಗೂ ತಮಿಳುನಾಡಿನಲ್ಲಿ ನಡೆದ ಬಂದ್ ಎಲ್ಲಾ ಪಕ್ಷದ ನಾಯಕರಿಗೂ ಆತಂಕ ತಂದಿದ್ದು, ತಮಿಳುನಾಡಿಗೆ ನೀರು ನಿಲ್ಲಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆದಿದೆ. ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈಗಾಗಲೇ ಪ್ರಧಾನಿಗೆ ಕರ್ನಾಟಕದ ವಸ್ತುಸ್ಥಿತಿಯ ಕುರಿತು ವಿವರ ನೀಡಿದ್ದು, ಇಂದು ದೆಹಲಿಗೆ ಹೋಗಿ ಪುನಃ ಕಾನೂನು ತಜ್ಞರ ಬಳಿ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕೂಡಾ ಕೇಂದ್ರ ಸಚಿವ ಅನಂತಕುಮಾರ್ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.  ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಕೂಡಾ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಗೆ ಪತ್ರ ಬರೆದು, ನಾಡಿನ ಜನರ ಆತಂಕವನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ಇದರಿಂದ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ವಿಶ್ವಾಸವಿದ್ದು, ಆದರೂ ಅಂತಿಮ ಹಂತದ ಒಳಸಂಧಾನ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin