ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಕ್ಕೆ ನವಾಜ್ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Nawaz

ವಾಷಿಂಗ್ಟನ್, ಸೆ.19– ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಮುಖವಾಗಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಸಜ್ಜಾಗಿದ್ದು, ಅದಕ್ಕಾಗಿ ಕುತಂತ್ರ-ಷಡ್ಯಂತ್ರಗಳನ್ನು ರೂಪಿಸಿದ್ದಾರೆ.   ಇಸ್ಲಾಮಾಬಾದ್‍ನಿಂದ ನಿನ್ನೆ ರಾತ್ರಿ ನ್ಯೂಯಾರ್ಕ್‍ಗೆ ಆಗಮಿಸಿರುವ ಅವರು ಸೆ.21ರಂದು ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಮಾತನಾಡಲಿದ್ದಾರೆ. ಪ್ರಮುಖವಾಗಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿ ಅದನ್ನು ಅಂತಾರಾಷ್ಟ್ರೀಕರಣಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲು ತುದಿಗಾಲದಲ್ಲಿ ನಿಂತಿದ್ದಾರೆ. ಕಾಶ್ಮೀರದ ಉರಿ ವಲಯದಲ್ಲಿ ನಿನ್ನೆ ನಡೆದ ಉಗ್ರರ ದಾಳಿ ಸೇರಿದಂತೆ ಇತ್ತೀಚಿನ ಭಯೋತ್ಪಾದಕರ ಕೃತ್ಯಗಳ ನೆತ್ತರು ಪಾಕಿಸ್ತಾನಕ್ಕೆ ಮೆತ್ತಿಕೊಂಡಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಕುತಂತ್ರ ರೂಪಿಸುತ್ತಿರುವ ಪಾಕಿಸ್ತಾನವು, ಅಲಿಪ್ತ ರಾಷ್ಟ್ರಗಳ (ನಾಮ್) ಶೃಂಗಸಭೆಯಲ್ಲಿಯೂ ಈ ವಿಷಯವನ್ನು ನಿನ್ನೆ ಪ್ರಮುಖವಾಗಿ ಪ್ರಸ್ತಾಪಿಸಿತ್ತು.

ಪಾಕಿಸ್ತಾನ ನಿಯೋಗದ ನೇತೃತ್ವ ವಹಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ನಿನ್ನೆ ರಾತ್ರಿ ನಾಮ್ ಶೃಂಗಸಭೆಯಲ್ಲಿ ಈ ವಿಷಯ ಎತ್ತಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿಷಯ ಇತ್ಯರ್ಥವಾಗದ ಹೊರತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ ಎಂದರು.  ಕಳೆದ ಎರಡೂವರೆ ತಿಂಗಳಿನಿಂದ ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ದಾಳಿಯಿಂದ ಅಮಾಯಕ ಕಾಶ್ಮೀರಿಗಳು ನಲುಗಿ ಹೋಗಿದ್ದಾರೆ. ಇದನ್ನು ನಾಮ್ ಸದಸ್ಯ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅಜೀಜ್ ಕೋರಿದ್ದಾರೆ.

Facebook Comments

Sri Raghav

Admin