ಸಹಕಾರ ಸಂಘಗಳು ರಾಜಕೀಯ ಮುಕ್ತವಾಗಿರಲಿ

ಈ ಸುದ್ದಿಯನ್ನು ಶೇರ್ ಮಾಡಿ

kr--pete

ಕೆ.ಆರ್.ಪೇಟೆ, ಸೆ.19– ಸಹಕಾರ ಸಂಘಗಳು ಹಾಗೂ ನೌಕರರು ಆರಂಭಿಸುವ ಪತ್ತಿನ ಸಹಕಾರ ಸಂಘಗಳು ಗುಂಪುಗಾರಿಕೆ ಮತ್ತು ರಾಜಕೀಯ ಮುಕ್ತವಾಗಿರಬೇಕು. ಈ ಮೂಲಕ ಸಂಘಗಳ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ಅಭಿಪ್ರಾಯಪಟ್ಟರು. ಕೃಷ್ಣರಾಜಪೇಟೆ ತಾಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಸಹಕಾರ ಸಂಘದ ಸಮಗ್ರ ಅಭಿವೃದ್ದಿಗೆ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಮತ್ತು ನೌಕರರ ಕಾರ್ಯ ದಕ್ಷತೆ ಅಗತ್ಯ. ಹಾಗಾಗಿ ಆಡಳಿತ ಮಂಡಳಿ ಮತ್ತು ನೌಕರರು ಪ್ರಾಮಾಣಿಕತೆ ಮತ್ತು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹಾಗೂ ದೇಶಕ್ಕೆ ಅಲ್ಲದೆ ತಾಲೂಕಿಗೆ ವಿಶೇಷ ಗೌರವ ತಂದಿರುವ ಅಂಚಿಸಣ್ಣಸ್ವಾಮಿಗೌಡರು ಸಂಸ್ಥಾಪಕ ಅಧ್ಯಕ್ಷರಾಗಿ ಕಳೆದ 12ವರ್ಷಗಳ ಹಿಂದೆ ಕೇವಲ ಒಂದೂವರೆ ಲಕ್ಷ ರೂ. ಶೇರು ಬಂಡವಾಳದಲ್ಲಿ ಆರಂಭಿಸಿದ ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘವು ಇಂದು ಅಂದಾಜು ಒಂದೂವರೆ ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮ ಬೆಳೆವಣಿಗೆ ಹೊಂದುತ್ತಿದೆ. ಶೇರು ಬಂಡವಾಳವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಸಂಘದ ಅಭಿವೃದಿಗೆ ಶೇರುದಾರರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಹೆಚ್.ಯೋಗೇಶ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹೆಚ್.ಎಲ್.ಜಯರಾಮು ವಾರ್ಷಿಕ ವರದಿ ಮಂಡಿಸಿದರು. ಸಂಘದ ಷೇರುದಾರರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 3 ಮಕ್ಕಳಿಗೆ ನಗದು ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಸಂಘದ ಗೌರವಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ.ಲೋಕೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಕೆ.ಮಂಜುನಾಥ್ ಹಾಜರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin