ಮರೀಚಿಕೆಯಾದ ಸ್ವಚ್ಛ ಭಾರತ ಅಭಿಯಾನ ನೈರ್ಮಲ್ಯವಿಲ್ಲದ ವಿಜಯಪುರ

ಈ ಸುದ್ದಿಯನ್ನು ಶೇರ್ ಮಾಡಿ

clean

ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಮೀಪವೇ ಇರುವ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನೈರ್ಮಲ್ಯವೇ ಇಲ್ಲದೆ ಸ್ವಚ್ಛ ಭಾರತದ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಸುಮಾರು 25 ವರ್ಷಗಳ ಹಿಂದೆ ಕೇವಲ 15 ರಿಂದ 20 ಸಾವಿರ ಜನಸಂಖ್ಯೆ ಇದ್ದಾಗ ಗಾಂಧಿ ಚೌಕದ ಬಳಿ ನಾಲ್ಕು ಜಾಗಗಳಲ್ಲಿ, ಟೌನ್ ಹಾಲ್ ಬಳಿ ಎರಡು ಕಡೆ- ಹೀಗೆ ಸಾರ್ವಜನಿಕ ಓಡಾಟ ಇದ್ದಂತ ಜಗಗಳಲ್ಲೆಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ಮೂತ್ರಾಲಯಗಳನ್ನು ನಿರ್ಮಿಸಲಾಗಿತ್ತು.

ಆದರೆ, ಕೆಲ ವರ್ಷಗಳಿಂದ ಬಹಳ ಹಿಂದಿನಿಂದ ಇದ್ದಂತಹ ಸರ್ಕಾರಿ ಸ್ವತ್ತಾದ ಮೂತ್ರಾಲಯಗಳನ್ನು ಅಕ್ಕ-ಪಕ್ಕ ಇದ್ದಂತಹವರು ಅಲ್ಲಿ ಶುಚಿತ್ವ ಕಾಪಾಡುವ ಸಲುವಾಗಿ ಮೂತ್ರಾಲಯಗಳನ್ನು ಒಡೆದು ಹಾಕಿದ್ದಾರೆ. ಆದರೆ, ಅದರ ಬಗ್ಗೆ ಪುರಸಭಾ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ. ಪುರಸಭೆಯ ಆಸ್ತಿ ನಷ್ಟವಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ದುರ್ದೈವದ ಸಂಗತಿ.
ಇದೀಗ ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ವಿಜಯಪುರ ಪಟ್ಟಣದಲ್ಲಿ ಇದೆ. ವಾಣಿಜ್ಯ ಹಾಗೂ ಸಾಂಸ್ಕೃತಿ  ನಗರಿಯಾದ ಇಲ್ಲಿಗೆ ಪ್ರತಿದಿನ ಸುತ್ತಮುತ್ತಲ ಗ್ರಾಮಗಳು ಮತ್ತಿತರೆಡೆಗಳಿಂದ 20 ರಿಂದ 25 ಸಾವಿರ ಜನಸಂಖ್ಯೆ ಬಂದು ಹೋಗುತ್ತಾರೆ.

 

 

ಪಟ್ಟಣದ ಯಾವುದೇ ಮೂಲೆಯಲ್ಲಿಯೂ ಎರಡು ಪೇ ಅಂಡ್ ಯೂಸ್(ಹಣ ಪಾವತಿಸುವ)ಶೌಚಾಲಯ ಹೊರತುಪಡಿಸಿದರೆ, ಒಂದಾದರೂ ಸಾರ್ವಜನಿಕ ಉಚಿತ ಮೂತ್ರಾಲಯ ಹಾಗೂ ಶೌಚಾಲಯಗಳು ಇರುವುದಿಲ್ಲ.ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ್ದ 10 ಆಸನಗಳ ಎರಡು ಶೌಚಾಲಯಗಳ ಪೈಕಿ ಸಂತೆ ಮೈದಾನದಲ್ಲಿರುವ ಶೌಚಾಲಯ ಇದುವರೆವಿಗೂ ಪ್ರಾರಂಭಗೊಂಡಿಲ್ಲ. ಇನ್ನು ಚಿಕ್ಕಬಳ್ಳಾಪುರ ರಸ್ತೆಯ ವಾಟರ್ ಟ್ಯಾಂಕ್ ಬಳಿಯಲ್ಲಿನ ಶೌಚಾಲಯ ಪ್ರಾರಂಭಗೊಂಡಿದ್ದರೂ ಅಲ್ಲಿ ಸಾರ್ವಜನಿಕರ ಓಡಾಟ ಅಷ್ಟಾಗಿ ಇರುವುದಿಲ್ಲ. ಪುರಸಭೆ ವತಿಯಿಂದ ನೂತನವಾಗಿ ನಿರ್ಮಿಸಲು ಶೌಚಾಲಯಗಳಿಗೆ ಅನುಮತಿ ಆಗಿದ್ದರೂ, ಇದುವರೆಗೂ ಜಗದ ಬಗ್ಗೆ ಇನ್ನೂ ಸರಿಯಾಗಿ ತೀರ್ಮಾನವಾಗದೆ ನೂತನ ಮೂತ್ರಾಲಯ, ಶೌಚಾಲಯಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ.
ಬಸ್ ನಿಲ್ದಾಣದ ಹೋಟೆಲ್ ಹಿಂಭಾಗ ಪುರಸಭೆಯ ಮೂತ್ರಾಲಯ, ಶೌಚಾಲಯಗಳು ಇದ್ದರೂ ಅಲ್ಲಿನ ಸ್ವಚ್ಛತೆ ಕಾಪಾಡುವವರೇ ಇಲ್ಲ. ಹಾಗಾಗಿ ಗಬ್ಬೆದ್ದು ಹೋಗಿದೆ. ನಾಲ್ಕಾರು ಬಾರಿ ಅಲ್ಲಿ ಹೋಗಿ ಬಂದರೆ ರೋಗವನ್ನು ಜತೆಯಲ್ಲಿ ಹೊತ್ತುತರುವುದು ಖಚಿತ. ಇದು ಹಣ ಪಾವತಿಸಿ ಉಪಯೋಗಿಸುವ ಶೌಚಾಲಯವಾಗಿದೆ. ಪುರಸಭೆಗೆ ಇದರಿಂದ ಲಕ್ಷಾಂತರ ರೂ. ವರಮಾನ ಬರುತ್ತಿದ್ದರೂ ಹಲವಾರು ದಶಕಗಳಿಂದ ಹಳೆ ಶೌಚಾಲಯದ ಕಟ್ಟಡವನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿರುವುದು ಬೇಸರದ ಸಂಗತಿ. ಟೌನ್‍ಹಾಲ್ ವೃತ್ತದ ಬಳಿಯ ಹಾಪ್‍ಕಾಮ್ಸ್‍ನ ಅಂಗಡಿ ತೆಗೆಸಿ, ಅಲ್ಲಿ ನಿರ್ಮಿಸಿರುವ, ಪಾವತಿಸುವ ಶೌಚಾಲಯ ಇದ್ದುದರಲ್ಲಿ ಉತ್ತಮವಾಗಿದೆ. ಈ ಎಲ್ಲ ತೊಂದರೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವ ಕಾರ್ಯ ಸಾಗಿದ್ದು ಉತ್ತಮ ಬೆಳವಣಿಗೆಯಾಗಿದೆ.

 

ಉಳಿದಂತೆ ಮತ್ತಾವುದೇ ಮೂತ್ರಾ ಲಯಗಳಾಗಲಿ, ಶೌಚಾಲಯಗಳಾಗಲಿ, ನಿರ್ಮಾಣ ವಾಗುವ ಸ್ಥಿತಿ ಅತಂತ್ರವಾಗಿದೆ. ಸಾರ್ವಜನಿಕರು ಹಾಗೂ ಹೊರ ಊರುಗಳಿಂದ ಬಂದವರು ಎಲ್ಲೆಂದರಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ಪಟ್ಟಣದ ಬಹುತೇಕ ಸ್ಥಳಗಳೂ ಕೂಡ ಸಾಂಕ್ರಾಮಿಕ ರೋಗದ ವಾಸಸ್ಥಾನವಾಗುತ್ತಿವೆ.ಇನ್ನು ಹೊರ ಊರುಗಳಿಂದ ಬಸ್‍ಗಳಲ್ಲಿ ಬರುವವರು ಟೌನ್‍ಹಾಲ್ ಬಳಿ ಇಳಿದೊಡನೆ ಮೂತ್ರ ವಿಸರ್ಜಿಸಲು ಯಾವುದೆ ಉಚಿತ ಮೂತ್ರಾಲಯ ದೊರೆಯದೆ ಪುರಸಭಾ ಗೋಡೆ, ಸರ್ಕಾರಿ ಮಾದರಿ ಬಾಲಕರ ಪಾಠಶಾಲೆ ಸಮೀಪದ ಜಾಗವನ್ನು ಆಶ್ರಯಿಸುತ್ತಿದ್ದಾರೆ. ಹಾಗಾಗಿ ಇಡೀ ಪಟ್ಟಣ ಗಬ್ಬೆದ್ದು ಹೋಗಿದೆ.

 

ಪಟ್ಟಣದ ಹೃದಯ ಭಾಗವಾದ ಗಾಂಧಿ ಚೌಕದಲ್ಲಿ ನೂರಾರು ವಾಣಿಜ್ಯ ಮಳಿಗೆಗಳಿದ್ದು, ಅಲ್ಲಿನ ಅಂಗಡಿಗಳವರಿಗೆ ಹಾಗೂ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಬರುವ ಸಾರ್ವಜನಿಕರಿಗೆ ಸುತ್ತಮುತ್ತ 1 ಕಿಮೀ ವ್ಯಾಪ್ತಿಯಲ್ಲಿ ಒಂದೂ ಮೂತ್ರಾಲಯವಿಲ್ಲದೆ ಪರದಾಡಬೇಕು ಹಾಗೂ ಅಂಗಡಿಗಳವರು ಮನೆಗಳಿಗೆ ಹೋಗಿ ಬರಬೇಕಿದೆ.ಸುತ್ತಮುತ್ತಲ ಪ್ರದೇಶಗಳಿಂದ ಬರುವ ಸಾರ್ವಜನಿಕರು ಗಾಂಧಿಚೌಕದ ಸುತ್ತಮುತ್ತಲೂ ಸಂದು-ಗೊಂದಿಗಳಲ್ಲಿ ಮೂತ್ರ ವಿಸರ್ಜಿಸಿ ಪರಿಸರ ಹಾಳು ಮಾಡುತ್ತಿದ್ದಾರೆ.ಇತ್ತೀಚೆಗೆ ದೇಶದಾದ್ಯಂತ ಸ್ವಚ್ಛ ಭಾರತದ ಪರಿಕಲ್ಪನೆ ಹೆಚ್ಚಾಗುತ್ತಿದ್ದರೂ, ವಿಜಯಪುರ ಪಟ್ಟಣದಲ್ಲಿ ಮಾತ್ರ ಅದು ದೂರಾಗುತ್ತಿದೆ. 23 ವಾರ್ಡ್‍ಗಳಲ್ಲಿಯೂ ನೈರ್ಮಲ್ಯದ ಬಗ್ಗೆ ಹತ್ತಾರು ಅಡಿ ಎತ್ತರದ ಬರವಣಿಗೆಗಳ ಮೂಲಕ ಸ್ವಚ್ಛ ಭಾರತ ಸ್ವಚ್ಛ ವಿಜಯಪುರವೆಂಬ ಬೋರ್ಡ್ ಗಳನ್ನು ಬರೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

 

ಆ ಬರವಣಿಗೆಗಳಿಗೆ ಬರೆಸಿರುವ ಹಣದಲ್ಲಿಯೇ ಬಸ್ ನಿಲ್ದಾಣದ ನಾಲ್ಕೂ ಮೂಲೆಗಳಲ್ಲಿನಾಲ್ಕು ಆಸನಗಳ ಮೂತ್ರಾಲಯಗಳನ್ನು ನಿರ್ಮಿಸಿದರೆ, ಸ್ವಚ್ಛತೆಯ ರೂಪ ಕಾರ್ಯರೂಪಕ್ಕೆ ಇಳಿದಂತಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.ಸ್ವಚ್ಛ ಭಾರತ ಅಭಿಯಾನ ನಮ್ಮ ಪಟ್ಟಣದಲ್ಲಿ ಇಲ್ಲವೆಂದೇ ಹೇಳಬೇಕು. ಈಗಾಗಲೇ ಪಟ್ಟಣದಲ್ಲಿ ಡೆಂಘೀ ಮತ್ತಿತರ ರೋಗಗಳು ಹರಡುತ್ತಿವೆ. ಸೊಳ್ಳೆ ಉತ್ಪಾದನೆ ಮಾಡುವ ಕಾರ್ಖಾನೆಯಾಗಿರುವ ಪಟ್ಟಣದ ಬಹುತೇಕ ಸ್ಥಳಗಳಲ್ಲಿ ಪುರಸಭೆಯವರು ಡಿಟಿಟಿ ಪೌಡರ್, ಪೆನಾಯಿಲ್ ಹಾಕಿ ಕನಿಷ್ಟ ಮುಂಜಾಗ್ರತಾ ಕ್ರಮವನ್ನಾದರೂ ಕೈಗೊಳ್ಳಬೇಕಿದೆ. ಶೀಘ್ರವೇ ಸಾರ್ವಜನಿಕ ಶೌಚಾಲಯ, ಮೂತ್ರಾಲಯಗಳನ್ನು ನಿರ್ಮಿಸಿ ಒಳಿತು ಮಾಡಲಿ ಎಂದು ಜನರು ಆಗ್ರಹಿಸಿದ್ದಾರೆ. ಅತಿ ಹೆಚ್ಚಿನ ಜನಸಂದಣಿ ಇರುವ ಬಸ್ ನಿಲ್ದಾಣ, ಚನ್ನರಾಯಪಟ್ಟಣ ಸರ್ಕಲ್, ಗಾಂಧಿ ಚೌಕ, ಟೌನ್ ಹಾಲ್, ಶಿಡ್ಲಘಟ್ಟ ವೃತ್ತಗಳಲ್ಲಿ ಕನಿಷ್ಠ ಉಚಿತ ಮೂತ್ರಾಲಯಗಳನ್ನು ನಿರ್ಮಿಸಿ, ಪ್ರಧಾನಿ ನರೇಂದ್ರ ಮೋದಿರವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವರೇ ಕಾದು ನೋಡಬೇಕಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin