ಪಾಲಿಷ್ ನೆಪದಲ್ಲಿ ಮಹಿಳೆಯರಿಗೆ ವಂಚನೆ : ಕಳ್ಳನಿಗೆ ಗೂಸಾ
ಹಾಸನ, ಸೆ.23-ಚಿನ್ನ ಪಾಲಿಷ್ ಮಾಡುವ ನೆಪದಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಚೋರರಿಗೆ ಗ್ರಾಮಸ್ಥರೇ ಹಿಡಿದು ಥಳಿಸಿರುವ ಘಟನೆ ಆಲೂರು ತಾಲೂಕಿನ ಬುಕ್ಕಾಪುರದಲ್ಲಿ ನಡೆದಿದೆ.ಬಿಹಾರ ಮೂಲದ ಮುನ್ನ (25) ಒದೆ ತಿಂದ ಯುವಕನಾಗಿದ್ದು, ಗ್ರಾಮದ ಮನೆ ಮನೆಗೆ ಭೇಟಿಕೊಟ್ಟು ಒಡವೆಗಳಿಗೆ ಪಾಲಿಷ್ ಮಾಡಿಕೊಡುವುದಾಗಿ ಗೃಹಿಣಿಯರನ್ನು ಪುಸಲಾಯಿಸುತ್ತಿದ್ದ.ಆತನನ್ನು ಪರೀಕ್ಷಿಸಲೆಂದೇ ಮಹಿಳೆಯೊಬ್ಬರು ನಕಲಿ ಆಭರಣ ನೀಡಿ ಪಾಲಿಷ್ ಮಾಡಲು ತಿಳಿಸಿದರು. ಈ ವೇಳೆ ಅವುಗಳನ್ನು ದೋಚಲು ಪ್ರಯತ್ನಿಸಿದಾಗ ಕೂಗಿಕೊಂಡು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಸುನೀತಾ, ಜಯಮ್ಮ, ಚಂದ್ರಮ್ಮ ಎಂಬ ಮಹಿಳೆಯರಿಗೆ ಮೋಸ ಮಾಡಿದ್ದ ಎಂದು ತಿಳಿದುಬಂದಿದೆ.ಪ್ರಸ್ತುತ ಆರೋಪಿಯನ್ನು ಆಲೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವರು ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಆರೋಪಿಗಳು ಕೈಗೆ ಸಿಗುತ್ತಿರಲಿಲ್ಲ. ಈಗ ಮುನ್ನನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ.
► Follow us on – Facebook / Twitter / Google+