ಪ್ರಕಾಶನಗರದ ಪದ್ಮಾವತಿಗೆ ಬಿಬಿಎಂಪಿ ಮೇಯರ್ ಪಟ್ಟ..?

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಸೆ.26- ಪ್ರಕಾಶನಗರ ವಾರ್ಡ್‍ನ ಸದಸ್ಯೆ ಜಿ.ಪದ್ಮಾವತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ. ಇದೇ 28ರಂದು ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದ್ದು, ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಹಿಡಿಯುವ ಸಂಬಂಧ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯುವ ಸಂಬಂಧ ಎಲ್ಲ ಮಾತುಕತೆಗಳು ಮುಗಿದಿದ್ದು, ಅಧಿಕಾರ ಹಂಚಿಕೆಯ ಕಸರತ್ತು ಕೂಡ ಪೂರ್ಣಗೊಂಡಿದೆ. ಜಿ.ಪದ್ಮಾವತಿ ಅವರ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಸುಬ್ರಹ್ಮಣ್ಯ ಎಂಬುವವರು ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರಿಗೆ ನೀಡಿದ್ದ ದೂರನ್ನು ಕಲಂ33/1ರ ಪ್ರಕಾರ ವಜಾ ಮಾಡಲಾಗಿದೆ.

ಸುಬ್ರಹ್ಮಣ್ಯ ಅವರು ದೂರನ್ನು ಆಯೋಗಕ್ಕೆ ಸಲ್ಲಿಸಬೇಕಾಗಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿರುವುದು ಪದ್ಮಾವತಿ ಅವರ ಆಯ್ಕೆ ಹಾದಿಯನ್ನು ಸುಗಮಗೊಳಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿ ಚುನಾವಣೆಯ ಸಾರಥ್ಯ ವಹಿಸಿರುವ ಸಚಿವ ರಾಮಲಿಂಗಾರೆಡ್ಡಿಯವರು ಇಂದು 340 ನೂತನ ಬಸ್‍ಗಳ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಬಿಬಿಎಂಪಿ ಮೇಯರ್ ಚುನಾವಣೆ ವಿಷಯ ಪ್ರಸ್ತಾಪಿಸಿ ಜ್ಯೇಷ್ಠತೆ ಆಧಾರದ ಮೇಲೆ ಮೇಯರ್ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಮಾರ್ಮಿಕವಾಗಿ ಹೇಳುವುದರ ಮೂಲಕ ಪದ್ಮಾವತಿ ಆಯ್ಕೆಯನ್ನು ಪರೋಕ್ಷವಾಗಿ ದೃಢೀಕರಿಸಿದ್ದಾರೆ.

ಮೇಯರ್ ಆಕಾಂಕ್ಷಿಗಳಾಗಿ ಜಿ.ಪದ್ಮಾವತಿಯವರ ಜತೆಗೆ ಸೌಮ್ಯ ಶಿವಕುಮಾರ್, ಲಾವಣ್ಯ ಗಣೇಶ್‍ರೆಡ್ಡಿ ಅವರುಗಳೂ ಇದ್ದು, ಮೂವರ ಹೆಸರುಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಸಿದ್ದರಾಮಯ್ಯನವರು ಒಬ್ಬರ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಜೆಡಿಎಸ್‍ನವರಿಗೆ ಮೊದಲಿನಿಂದಲೂ ಬಿಜೆಪಿ ಜತೆ ಮೈತ್ರಿಗೆ ಇಷ್ಟವಿರಲಿಲ್ಲ. ನಾವು ಪಕ್ಷೇತರರನ್ನು ಕೂಡ ಕೈ ಬಿಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.  ಮೇಯರ್ ಸ್ಥಾನ ಕಾಂಗ್ರೆಸ್‍ಗೆ, ಉಪಮೇಯರ್ ಸ್ಥಾನ ಜೆಡಿಎಸ್‍ಗೆ ಎಂದು ತೀರ್ಮಾನವಾಗಿದೆ. ಮೇಯರ್ ಸ್ಥಾನವನ್ನು ಜೆಡಿಎಸ್‍ಗೆ ನೀಡಬೇಕೆಂಬ ಪ್ರಸ್ತಾವನೆ ಬಂದಿದ್ದು ನಿಜ. ಈ ಗೊಂದಲವನ್ನು ನಾವು ಬಗೆಹರಿಸಿದ್ದೇವೆ. ನಾಳೆ ಮೇಯರ್ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸಿ ಅಧಿಕಾರ ನಡೆಸುವುದು ಖಚಿತವಾಗಿದ್ದು, ಜೆಡಿಎಸ್‍ಗೆ ಉಪಮೇಯರ್ ಸ್ಥಾನ ಹಾಗೂ ಆರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಜೆಡಿಎಸ್ ಆಡಳಿತ ಪಕ್ಷದ ನಾಯಕ ಸ್ಥಾನ ಕೊಡುವಂತೆ ಕೇಳಿದೆ. ಈ ಬಗ್ಗೆ ಇನ್ನೂ ಚರ್ಚೆ ಮುಂದುವರಿದಿದೆ.  ನಿನ್ನೆಯವರೆಗೆ ಬಿಜೆಪಿ ಕೂಡ ದೋಸ್ತಿ ಕುದುರಿಸಿ ಅಧಿಕಾರ ಗದ್ದುಗೆ ಹಿಡಿಯುವ ಪ್ರಯತ್ನ ನಡೆಸಿತ್ತು. ನಿನ್ನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಗೊಳ್ಳುತ್ತಿದ್ದಂತೆ ತನ್ನ ಪ್ರಯತ್ನದಿಂದ ಹಿಂದೆ ಸರಿದಿದೆಯಾದರೂ ಹೆಚ್ಚು ಸ್ಥಾನಗಳನ್ನು ಹೊಂದಿರುವ ಈ ಪಕ್ಷ ಮೇಯರ್ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಯನ್ನು ಇಳಿಸಲಿದೆ. ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಳ್ಳುವ ಕೊನೆ ಕ್ಷಣದವರೆಗೆ ಕುತೂಹಲವಂತೂ ಇದ್ದೇ ಇರುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin