ಮೈಸೂರಿನಲ್ಲಿ ನಿಲ್ಲದ ಸರ ಅಪಹರಣ, ವೃದ್ಧೆಯರೇ ಟಾರ್ಗೆಟ್

ಈ ಸುದ್ದಿಯನ್ನು ಶೇರ್ ಮಾಡಿ

Chain

ಮೈಸೂರು, ಸೆ.26- ಎರಡು ದಿನಗಳ ಹಿಂದೆಯಷ್ಟೆ ಮನೆಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನಾಭರಣ ದೋಚಿದ ಘಟನೆ ಮಾಸುವ ಮುನ್ನವೇ ಇಂದು ಬೆಳ್ಳಂಬೆಳಗ್ಗೆ ಸರಗಳ್ಳರು ಮೂವರು ವೃದ್ಧೆಯರ ಸರಗಳನ್ನು ಅಪಹರಿಸಿದ್ದಾರೆ. ಸರಸ್ವತಿಪುರಂ: ಮನೆ ಗೇಟ್ ತೆಗೆದು ವೃದ್ಧೆ ಇನ್ನೇನು ಒಳಹೋಗಬೇಕೆನ್ನುವಷ್ಟರಲ್ಲಿ ಬೈಕ್ನಲ್ಲಿ ಹಿಂಬಾಲಿಸಿ ಮನೆ ಬಳಿ ಬಂದ ಸರಗಳ್ಳರು ಅವರ 65 ಗ್ರಾಂ ಸರ ಎಗರಿಸಿ ಪರಾರಿಯಾಗಿರುವ ಘಟನೆ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿಕೆ ಬಡಾವಣೆಯ 4ನೆ ಫೇಸ್, 1ನೆ ಕ್ರಾಸ್ ನಿವಾಸಿ ಗೌರಮ್ಮ (67) ಎಂಬುವರು ಇಂದು ಬೆಳಗ್ಗೆ 6.30ರಲ್ಲಿ ಮನೆ ಒಳಗೆ ಹೋಗುವಾಗ ಕಪ್ಪು ಪಲ್ಸರ್ ಬೈಕ್ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ.

ಕುವೆಂಪು ಠಾಣೆ:
ವಾಯುವಿಹಾರ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ರಾಮಕೃಷ್ಣ ನಗರದ 9ನೆ ಕ್ರಾಸ್, 1ನೆ ಬ್ಲಾಕ್ ನಿವಾಸಿ ಚೂಡಾಮಣಿ ಎಂಬುವರನ್ನು ಬೈಕ್ನಲ್ಲಿ ಹಿಂಬಾಲಿಸಿದ ಸರಗಳ್ಳರು ಇವರ 45 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾರೆ.

ವಿಜಯನಗರ ಠಾಣೆ:

ಹೆಬ್ಬಾಳುವಿನ 1ನೆ ಹಂತ, 9ನೆ ಕ್ರಾಸ್ ನಿವಾಸಿ ಶಕೀಲಾ ಬೇಗಂ (56) ಎಂಬುವರು ಮನೆಯಲ್ಲಿದ್ದಾಗ ಇಬ್ಬರು ಸರಗಳ್ಳರು ಇವರ ಮನೆ ಬಳಿ ಬಂದು ಬೈಕ್ ನಿಲ್ಲಿಸಿ ಹಿಂದಿ ಟೀಚರ್ ಮನೆ ಎಲ್ಲಿ ಎಂದು ವಿಚಾರಿಸಿದ್ದಾರೆ. ವಿಳಾಸ ಹೇಳಲು ಶಕೀಲಾ ಬೇಗಂ ಗೇಟ್ ಬಳಿ ಬರುತ್ತಿದ್ದಂತೆ ಹಿಂಬದಿ ಸವಾರ 33 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ. ಈ ಮೂರೂ ಸರಗಳ್ಳತನಗಳನ್ನು ಒಂದೇ ಗ್ಯಾಂಗ್ನವರು ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೇವಲ 6.30 ರಿಂದ 7.30ರ ವರೆಗೆ ಅಂದರೆ ಒಂದು ಗಂಟೆ ಅವಧಿಯಲ್ಲಿ ಈ ಮೂರೂ ಕಡೆ ವೃದ್ಧೆಯರ ಸರಗಳನ್ನು ಎಗರಿಸಿದ್ದಾರೆ.

ಈ ಮೂರೂ ಪ್ರಕರಣಗಳನ್ನು ಆಯಾ ಠಾಣೆ ಪೊ ಲೀಸರು ದಾಖಲಿಸಿಕೊಂಡು ಸರಗಳ್ಳರ ಬೇಟೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರತಿ ಬಾರಿಯೂ ಕಪ್ಪು ಪಲ್ಸರ್ ಬೈಕ್ನಲ್ಲಿ ಬರುವ ಇಬ್ಬರು ಸರಗಳ್ಳರು ಹೆಲ್ಮೆಟ್ ಧರಿಸಿ ವಾಯುವಿಹಾರಕ್ಕೆ ಹೋಗುವ ವೃದ್ಧೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳನ್ನು ಎಗರಿಸುತ್ತಿದ್ದು, ಅವರನ್ನು ಹಿಡಿಯುವುದು ಪೊ ಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸರಗಳ್ಳರ ಬೇಟೆಗಾಗಿಯೇ ರಚಿತಗೊಂಡಿರುವ ಶುಭೋದಯ ಎಂಬ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಸರಗಳ್ಳರು ರಾಜಾರೋಷವಾಗಿ ಸರಗಳ್ಳತನ ನಡೆಸುತ್ತಿರುವುದರಿಂದ ಮಹಿಳೆಯರು ಬೆಳಗ್ಗೆ ಹೊತ್ತು ಹೊರಗೆ ಹೋಗಲು ಭಯ ಪಡುವಂತಾಗಿದೆ.

ಇನ್ನೇನು ದಸರಾ ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊ ಲೀಸರನ್ನು ನಿಯೋಜಿಸುವ ಮೂಲಕ ಪ್ರವಾಸಿಗರ ಚಿನ್ನಾಭರಣಗಳನ್ನು ರಕ್ಷಿಸುವಲ್ಲಿ ಪೊ ಲೀಸರು ಕಾರ್ಯೋನ್ಮುಖವಾಗಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin