ರಾಜಕಾಲುವೆ ಒತ್ತುವರಿ ತೆರವು ಚುರುಕು : ಮತ್ತೆ ಘರ್ಜಿಸಿದ ಜೆಸಿಬಿಗಳು

ಈ ಸುದ್ದಿಯನ್ನು ಶೇರ್ ಮಾಡಿ

JCB-01

ಬೆಂಗಳೂರು, ಸೆ.26- ರಾಜಕಾಲುವೆ ಒತ್ತುವರಿ ತೆರವು ಮತ್ತೆ ಆರಂಭವಾಗಿದೆ. ನಗರದಲ್ಲಿ ಜೆಸಿಬಿಗಳ ಘರ್ಜನೆ ಪುನಃ ಶುರುವಾಗಿದೆ. ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಗಿಳಿದಿದ್ದು, ಭೂಗಳ್ಳರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಂಟಿಎಫ್‍ಗೆ ಸೂಚನೆ ನೀಡಿದ್ದಾರೆ. ಇಂದು ನಡೆದ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸುಮನಹಳ್ಳಿಯಿಂದ ಮಾಳಗಾಳುವರೆಗೆ ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ನಡೆಯಿತು.  ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್‍ನಲ್ಲಿ ಅಕ್ರಮವಾಗಿ ಕೈಗಾರಿಕಾ ಶೆಡ್‍ಗಳು ತಲೆ ಎತ್ತಿದ್ದು, ಏಳಕ್ಕೂ ಹೆಚ್ಚು ಶೆಡ್‍ಗಳನ್ನು ಬಿಬಿಎಂಪಿ ತೆರವು ಮಾಡಲು ಮುಂದಾಗಿದೆ. ಚೀಫ್ ಎಂಜಿನಿಯರ್ ಸಿದ್ದೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸುಮನಹಳ್ಳಿ ಬ್ರಿಡ್ಜ್‍ನಿಂದ ಮಾಳಗಾಳ ಬ್ರಿಡ್ಜ್‍ವರೆಗೆ ವೃಷಭಾವತಿ ವ್ಯಾಲಿ ಒತ್ತುವರಿಯನ್ನು ತೆರವುಗೊಳಿಸಲಾಗುತ್ತದೆ. ಸುಮಾರು 1ಕಿಮೀ ಉದ್ದ ಹಾಗೂ 40 ಅಡಿ ಅಗಲದಲ್ಲಿ ಎಲ್‍ಆರ್ ಮೆಟಲ್ ಸರ್ವೀಸ್ ಕಂಪೆನಿ ಸೇರಿದಂತೆ 10 ಕೈಗಾರಿಕೆಗಳು ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಿಕೊಳ್ಳಲು ಕಾಲಾವಕಾಶ ಕೊಡುವಂತೆ ಮಾಲೀಕರು ಮನವಿ ಮಾಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಂದ ವೃಷಭಾವತಿ ವ್ಯಾಲಿಯ 60 ಅಡಿ ಅಗಲಿರುವ ರಾಜಕಾಲುವೆಯಲ್ಲಿ ಕಾವೇರಿಪುರದ ವಾರ್ಡ್ ನಂ.103ರಲ್ಲಿ ಒತ್ತುವರಿಯಾಗಿರುವ ಖಾಲಿ ನಿವೇಶನಗಳು ಮತ್ತು ಕಟ್ಟಡಗಳು ಸುಮನಹಳ್ಳಿ ಜಂಕ್ಷನ್ ಸಮೀಪ ಸಾಲಾಪುರಿಯ ಸತ್ವ ಅಪಾರ್ಟ್‍ಮೆಂಟ್ ಸೇರಿದಂತೆ ಹಲವು ಕಟ್ಟಡಗಳ ಮಾಲೀಕರಿಂದ ರಾಜಕಾಲುವೆ ಒತ್ತುವರಿಯಾಗಿದೆ. ಅಲ್ಲದೆ, ಸರ್ವೆ ನಂ.6, 7, 8 ಮತ್ತು 9ರಲ್ಲಿ ಒಟ್ಟು 20ಕ್ಕೂ ಹೆಚ್ಚು ಆಸ್ತಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲಾಗುತ್ತಿದೆ.

ವೃಷಭಾವತಿ ಕಾಲುವೆಯಿಂದ ಆಚೆಗೆ 40 ಅಡಿ ಒತ್ತುವರಿಯಾಗಿದ್ದು, 12ಕ್ಕೂ ಹೆಚ್ಚು ಖಾಲಿ ನಿವೇಶನಗಳು, 8 ಕಟ್ಟಡಗಳು ತಲೆ ಎತ್ತಿವೆ. ಬಿಬಿಎಂಪಿ ಚೀಫ್ ಎಂಜಿನಿಯರ್ ಸಿದ್ದೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಜಂಟಿ ಆಯುಕ್ತ ಯತೀಶ್‍ಕುಮಾರ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಬಿರುಸುಗೊಂಡಿತ್ತು. ಸುಮನಹಳ್ಳಿ ಬ್ರಿಡ್ಜ್ ಬಳಿ, ನಾಗರಬಾವಿ ರಿಂಗ್‍ರಸ್ತೆ ಪಕ್ಕದಲ್ಲಿರುವ ರಾಜಕಾಲುವೆ-66 ಅಡಿ ಅಗಲದ ವೃಷಭಾವತಿ ವ್ಯಾಲಿ ಕಣಿವೆಯಲ್ಲಿ ಒತ್ತುವರಿಯಾಗಿದ್ದ 40 ಅಡಿ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. 9 ಕೈಗಾರಿಕೆಗಳು ಹಾಗೂ ಇತರೆ ಖಾಲಿ ನಿವೇಶನಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಲಾಜಿಲ್ಲದೆ ತೆರವು:

ಮುಖ್ಯ ಎಂಜಿನಿಯರ್ ಸಿದ್ದೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತೇವೆ, 22 ಆಸ್ತಿಗಳನ್ನು ತೆರವುಗೊಳಿಸಲಾಗುವುದು. ತೆರವು ಮಾಡಿದ ಕೂಡಲೇ ಸರ್ಕಾರದ ಜಾಗಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗುವುದು. ತೆರವು ಕಾರ್ಯಾಚರಣೆ ನಾಳೆಯೂ ಮುಂದುವರಿಯಲಿದೆ ಎಂದು ಹೇಳಿದರು. ಕೈಗಾರಿಕೆಗಳ ಮಿಷನ್‍ಗಳನ್ನು ತೆರವು ಮಾಡಲು ಸ್ವಲ್ಪ ಕಾಲಾವಕಾಶ ನೀಡುತ್ತೇವೆ. ಮೈಸೂರು ರಸ್ತೆವರೆಗೆ ತೆರವು ಮಾಡುತ್ತೇವೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದವರು, ಸಹಕರಿಸಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಬಿಎಂಟಿಎಫ್ ಪೆÇಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin