ಟ್ರ್ಯಾಕ್ಟರ್ ಡಿಕ್ಕಿ : ಪ್ರಿಯಕರ ಸಾವು-ಪ್ರೇಯಸಿ ಗಂಭೀರ
ಕುಣಿಗಲ್, ಸೆ.27- ಮಾರ್ಕೋನಹಳ್ಳಿ ಜಲಾಶಯ ವೀಕ್ಷಿಸಲು ಬೈಕ್ನಲ್ಲಿ ಹೋಗುತ್ತಿದ್ದ ಪ್ರೇಮಿಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಪ್ರಿಯಕರ ಮೃತಪಟ್ಟು, ಪ್ರೇಯಸಿ ಗಂಭೀರ ಗಾಯಗೊಂಡಿರುವ ಘಟನೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿರಂಗಪುರ ಗ್ರಾಮದ ಆನಂದ್(23) ಮೃತಪಟ್ಟ ಬೈಕ್ ಸವಾರ. ಮೂಲತಃ ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದ ಯುವತಿ ರಶ್ಮಿ(22) (ಹೆಸರು ಬದಲಾಯಿಸಲಾಗಿದೆ) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರಿಬ್ಬರೂ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಅಂದರಹಳ್ಳಿಯಲ್ಲಿ ಬೇರೆ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದರು. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು, ನಿನ್ನೆ ಮಾರ್ಕೋನಹಳ್ಳಿ ಜಲಾಶಯ ವೀಕ್ಷಿಸಲು ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ತೆರಳುತ್ತಿದ್ದಾಗ ಹೇಮಾವತಿ ಸರ್ಕಲ್ ಬಳಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಯುವತಿ ಗಂಭೀರ ಗಾಯಗೊಂಡಿದ್ದು, ಈಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.ಸ್ಥಳಕ್ಕೆ ಅಮೃತೂರು ಠಾಣೆ ಪಿಎಸ್ಐ ಧರ್ಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
► Follow us on – Facebook / Twitter / Google+