ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸಿ ಸಂಸತ್ ಬಳಿ ರಾಜ್ಯದ ಕಾಂಗ್ರೆಸ್ ಸಂಸದರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protesat

ನವದೆಹಲಿ, ಸೆ.27-ಕಾವೇರಿ ವಿವಾದದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಂಸತ್ ಬಳಿಯ ಗಾಂಧಿ ಪ್ರತಿಮೆ ಮುಂದೆ ಇಂದು ಸಂಸದರು, ರಾಜ್ಯಸಭಾ ಸದಸ್ಯರು, ಮಾಜಿ ಸಂಸದರು ಪ್ರತಿಭಟನೆ ನಡೆಸಿದರು.
ಸಂಸದರಾದ ಡಿ.ಕೆ.ಸುರೇಶ್, ಮುದ್ದಹನುಮೇಗೌಡ, ಪ್ರೊ.ಕೆ.ರಾಜೀವ್‍ಗೌಡ, ಆಸ್ಕರ್ ಫರ್ನಾಂಡೀಸ್, ಬಿ.ಕೆ.ಹರಿಪ್ರಸಾದ್, ಜಯರಾಮ ರಮೇಶ್, ಧೃವನಾರಾಯಣ್, ಕೆ.ಎಚ್.ಮುನಿಯಪ್ಪ, ಕೆ.ಸಿ.ರಾಮಮೂರ್ತಿ, ಮಾಜಿ ಸಂಸದ ಎಚ್.ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಇಂದು ಧರಣಿ ನಡೆಸಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗಿದೆ. ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಮಹದಾಯಿ ಹಾಗೂ ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿಯವರ ಮಧ್ಯಸ್ಥಿಕೆ ಅಗತ್ಯ ಎಂದು ಪ್ರತಿಪಾದಿಸಿದರು. ಈ ಹಿಂದೆ ಹಲವು ಅಂತಾರಾಜ್ಯ ಜಲವಿವಾದಗಳ ಸಂದರ್ಭದಲ್ಲಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿರುವ ಸಾಕಷ್ಟು ಉದಾಹರಣೆಗಳಿವೆ. ಕುಡಿಯುವ ನೀರಿನ ವಿಷಯವಾಗಿರುವುದರಿಂದ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಕಾವೇರಿ ಜಲಾಶಯಗಳಾದ ಕಬಿನಿ, ಕೆಆರ್‍ಎಸ್, ಹೇಮಾವತಿ, ಹಾರಂಗಿಯಲ್ಲಿ ನೀರಿಲ್ಲ. ಇರುವ ನೀರು ಕುಡಿಯಲು ಸಾಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪಾಲಿಸಲು ಸಾಧ್ಯವಾಗುತ್ತಿಲ್ಲ. ವಿಶೇಷ ಅಧಿವೇಶನ ನಡೆಸಿ ಹಾಲಿ ಇರುವ ನೀರು ಕುಡಿಯಲು ಮಾತ್ರ ಬಳಸುವುದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಿಯವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಅದೇ ರೀತಿ ಮಹದಾಯಿ ವಿಚಾರದಲ್ಲೂ ಕೂಡ ಮಧ್ಯಪ್ರವೇಶಿಸಿ ಉತ್ತರ ಕರ್ನಾಟಕ ಭÁಗದ ಜನರ ಬಾಯಾರಿಕೆ ನೀಗಿಸಬೇಕು ಎಂದು ಹೇಳಿದರು.

ಬಿ.ಕೆ.ಹರಿಪ್ರಸಾದ್, ಆಸ್ಕರ್‍ಫರ್ನಾಂಡೀಸ್, ಕೆ.ಎಚ್.ಮುನಿಯಪ್ಪ ಮುಂತಾದವರು ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕು. ನಾವೀಗ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನ್ಯಾಯಾಂಗದಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದೇವೆ. ರಾಜಕಾರಣವನ್ನು ಬದಿಗಿಟ್ಟು ಮಾನವೀಯತೆಯ ನೆಲೆಗಟ್ಟಿನಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin