ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆದಾಯ ತೆರಿಗೆ ದಾಳಿ ಇದು : 43 ಕೋಟಿ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

IT-Ride

ಬೆಂಗಳೂರು, ಸೆ.28- ನಗರ ವೈಟ್‍ಫೀಲ್ಡ್‍ನಲ್ಲಿರುವ ಪ್ರತಿಷ್ಠಿತ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಸಂಸ್ಥೆಯೊಂದರ ಟ್ರಸ್ಟಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 50 ಕೋಟಿ ರೂ. ಮೌಲ್ಯದ ಅಕ್ರಮ ಹಣ ಮತ್ತು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ನಡೆದ ಅತ್ಯಂತ ದೊಡ್ಡ ಆದಾಯ ತೆರಿಗೆ ದಾಳಿಗಳಲ್ಲಿ ಒಂದೆಂದು ಬಣ್ಣಿಸಲಾಗಿದೆ. ಈ ದಾಳಿಯಿಂದ 265 ಕೋಟಿ ರೂ. ಮೊತ್ತದ ದಾಖಲೆ ರಹಿತ ವ್ಯವಹಾರ ಪ್ರಕರಣಗಳೂ ಬೆಳಕಿಗೆ ಬಂದಿದೆ.
ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳಿಂದ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸೀಟುಗಳನ್ನು ನೀಡಲು ವಸೂಲಿ ಮಾಡಲಾಗಿತ್ತು ಎಂದು ಐಟಿ ಇಲಾಖೆ ಪ್ರಧಾನ ಆಯುಕ್ತರಾದ ನೂತನ್ ಒಡೆಯರ್ ತಿಳಿಸಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಆ.23ರಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ಸಂಸ್ಥೆ ಟ್ರಸ್ಟಿಗಳಲ್ಲಿ ಒಬ್ಬರಾದ ಅತ್ಯಂತ ಪ್ರಭಾವಿ ವ್ಯಕ್ತಿಯ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ 1000 ರೂ.ಗಳು ಮತ್ತು 500 ರೂ.ಗಳ ಮುಖಬೆಲೆಯ 50 ಕೋಟಿ ರೂ. ಹಣಗಳ ಕಂತೆಗಳ ದೊಡ್ಡ ರಾಶಿ ಇರುವುದು ಕಂಡುಬಂದಿತು. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದಾಗ ವೈದ್ಯಕೀಯ ಸೀಟು ನೀಡಲು ವಿದ್ಯಾರ್ಥಿಗಳಿಂದ ಭಾರೀ ಮೊತ್ತದ ವಂತಿಗೆಗಳನ್ನು ಸ್ವೀಕರಿಸಿರುವುದು ಹಾಗೂ 265 ಕೋಟಿ ರೂ. ಮೊತ್ತದ ದಾಖಲೆ ರಹಿತ ವ್ಯವಹಾರ ಪ್ರಕರಣಗಳೂ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ದಾಳಿಯ ನಂತರ ಆಂಧ್ರಪ್ರದೇಶ, ತಮಿಳುನಾಡು ಮತ್ತು ನವದೆಹಲಿಯಲ್ಲಿರುವ ಈ ಸಂಸ್ಥೆಯ ಟ್ರಸ್ಟ್‍ಗೆ ಸೇರಿದ ಇತರ ಸಹೋದರಿ ಸಂಸ್ಥೆಗಳಲ್ಲೂ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.  ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಅದಾಯ ತೆರಿಗೆ ದಾಳಿ ಇದಾಗಿದೆ. ಮೈನಾರಿಟಿ ಎಜುಕೇಷನ್ ಸೊಸೈಟಿ ಅಡಿಯಲ್ಲಿ ಈ  ಶಿಕ್ಷಣ ಸಂಸ್ಥೆ  ಬರುತ್ತಿದ್ದು ವಿದ್ಯಾರ್ಥಿಗಳಿಗೆ ಸೀಟು ಕೊಡಲು ಡೊನೇಶನ್ ಪಡೆದ ಹಣ ಇದು ಎಂದು ಅನುಮಾನವಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಯಾರು ಹಣ ನೀಡಿದ್ದರು ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದ್ದು ಅವರಿಗೆ ಡೊನೇಶನ್ ನೀಡಲು ಇಷ್ಟು ಹಣ ಹೇಗೆ ಬಂತು ಎನ್ನುವುದರ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು  ಐಟಿ ಇಲಾಖೆ ಪ್ರಧಾನ ಆಯುಕ್ತ ನೂತನ್  ಒಡೆಯರ್ ತಿಳಿಸಿದ್ದಾರೆ. ಇದು ದೇಶದ ಎರಡನೇ ಅತಿದೊಡ್ಡ ದಾಳಿಯಾಗಿದ್ದು, ಪುದುಚೇರಿಯ ಖಾಸಗಿ ಮೆಡಿಕಲ್ ಕಾಲೇಜಿನಿಂದ ಈ ಹಿಂದೆ 82 ಕೋಟಿ ರೂ.ಗಳ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.  ನವೋದಯ ಎಜುಕೇಷನಲ್ ಟ್ರಸ್ಟ್ ನಡೆಸುತ್ತಿರುವ ರಾಯಚೂರಿನ ಖಾಸಗಿ ವೈದ್ಯಕೀಯ ಕಾಲೇಜಿನಿಂದ ಕಳೆದ ವರ್ಷ ಡಿಸೆಂಬರ್‍ನಲ್ಲಿ 19.5 ಕೋಟಿ ರೂ. ಮೊತ್ತವನ್ನು ಜಫ್ತಿ ಮಾಡಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin