ಅ.1 ರಂದು ಹಾವೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-01
ಬೆಂಗಳೂರು, ಸೆ.29- ರಾಜ್ಯ ಬಿಜೆಪಿ ಘಟಕದಲ್ಲಿ ಭಾರೀ ತಳಮಳವನ್ನೇ ಸೃಷ್ಟಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೊದಲ ಬಹಿರಂಗ ರಾಜ್ಯ ಸಮಾವೇಶ ಅಕ್ಟೋಬರ್ 1ರಂದು ಹಾವೇರಿಯಲ್ಲಿ ನಡೆಯಲಿದೆ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯ ವಿರೋಧದ ನಡುವೆಯೂ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶ ಹೊಸ ರಾಜಕೀಯ ಧೃವೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.ಹಾವೇರಿಯ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಈ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ. ಈ ಸಮಾವೇಶಕ್ಕೆ ಬಿಜೆಪಿಯ ಕಾರ್ಯಕರ್ತರು ಭಾಗವಹಿಸಲೇಬಾರದೆಂದು ಯಡಿಯೂರಪ್ಪ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಒಂದು ವೇಳೆ ಭಾಗವಹಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದಾರೆ.

ಇದಾವುದನ್ನೂ ಲೆಕ್ಕಿಸದೆ ಪಕ್ಷದ ಬ್ಯಾನರ್ ಬಳಕೆ ಮಾಡಿಕೊಳ್ಳದೆಯೂ ಈಶ್ವರಪ್ಪ ಸಮಾವೇಶ ನಡೆಸಲು ಪಣ ತೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ಬಾರದಿದ್ದರೂ ಪಕ್ಷದೊಳಗಿರುವ ಯಡಿಯೂರಪ್ಪ ವಿರೋಧಿ ಬಣದ ಮುಖಂಡರೇ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಿರುವುದು ಗುಟ್ಟಾಗಿ ಉಳಿದಿಲ್ಲ. ಪಕ್ಷದಲ್ಲಿ ತಾವೊಬ್ಬ ಹಿಂದುಳಿದ ನಾಯಕ ಎಂಬುದನ್ನು ಸಾಬೀತುಪಡಿಸುವ ಕಾರಣಕ್ಕಾಗಿಯೇ ಈಶ್ವರಪ್ಪ ಬಿಎಸ್‍ವೈ ವಿರೋಧದ ನಡುವೆಯೂ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸಂಘಟನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪನವರನ್ನು ಮುಂದಿನ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಮಾಡಲು ಇದು ಅನುಕೂಲವಾಗುತ್ತದೆ ಎಂಬುದು ಈಶ್ವರಪ್ಪನವರ ವ್ಯಾಖ್ಯಾನ. ಆದರೆ, ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡುತ್ತಿರುವ ಒಂದು ಕಾಲದ ತಮ್ಮ ಪರಮಾಪ್ತ ಬಿಎಸ್‍ವೈಗೆ ಈ ಸಂಘಟನೆ ಮೂಲಕವೇ ತಾವು ಕೂಡ ಎಷ್ಟು ಪ್ರಬಲರು ಎಂಬುದನ್ನು ಸಾಬೀತುಪಡಿಸಲು ರಾಯಣ್ಣ ಬ್ರಿಗೆಡ್ ಹುಟ್ಟುಹಾಕಿದ್ದಾರೆ.

ಬಿಜೆಪಿ ವರಿಷ್ಠರು ಈ ಬಗ್ಗೆ ಈವರೆಗೂ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಬದಲಿಗೆ ಇಬ್ಬರೂ ನಾಯಕರನ್ನು ಚಿವುಟುವ ಕೆಲಸ ಸತತವಾಗಿ ನಡೆಯುತ್ತಲೇ ಇದೆ. ಒಂದು ಹಂತದಲ್ಲಿ ಪಕ್ಷಕ್ಕೆ ಅನುಕೂಲವಾಗುವುದಾದರೆ ಸಂಘಟನೆಗೆ ತೊಂದರೆ ಕೊಡಬೇಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಎಸ್‍ವೈಗೆ ಸೂಚನೆ ಕೊಟ್ಟಿದ್ದರು. ಇತ್ತ ಆರ್‍ಎಸ್‍ಎಸ್ ನಾಯಕರು ಮಾತ್ರ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಬಹಳ ವ್ಯವಸ್ಥಿತವಾಗಿಯೇ ಮಾಡುತ್ತಿದ್ದಾರೆ. ಅಂದರೆ ಒಂದು ಕಡೆ ಯಡಿಯೂರಪ್ಪನವರನ್ನು ಈಶು ವಿರುದ್ಧ ಎತ್ತಿ ಕಟ್ಟುವುದು ಮತ್ತೊಂದೆಡೆ ಈಶ್ವರಪ್ಪನವರನ್ನು ಬಿಎಸ್‍ವೈ ವಿರುದ್ಧ ಛೂ ಬಿಡುವ ಕೆಲಸವೂ ಮುಂದುವರಿದಿದೆ.

ಹಾವೇರಿಯಲ್ಲಿ ನಡೆಯಲಿರುವ ಈ ಸಮಾವೇಶ ಜನವರಿಯಲ್ಲಿ ಕೂಡಲ ಸಂಗಮದಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯಮಟ್ಟದ ಸಮಾವೇಶಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.ಬಿಜೆಪಿ ನಾಯಕರು ಇದರಲ್ಲಿ ಪಾಲ್ಗೊಳ್ಳುವರೇ ಎಂಬ ಯಕ್ಷಪ್ರಶ್ನೆಯೂ ಎದುರಾಗಿದೆ. ಭಾಗವಹಿಸಿದರೆ ಬಿಎಸ್‍ವೈ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಭಾಗವಹಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಒಟ್ಟಿನಲ್ಲಿ ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸಮಾವೇಶ ಎಲ್ಲ ರಾಜಕೀಯ ಪಕ್ಷಗಳಲ್ಲೂ ತಳಮಳ ಸೃಷ್ಟಿಸಿರುವುದು ಗುಟ್ಟಾಗಿ ಉಳಿದಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin