ಲೇವಾದೇವಿ ವ್ಯವಹಾರವೇ ಅತ್ತೆ- ಸೊಸೆ ಕೊಲೆಗೆ ಮುಳುವಾಯಿತೇ..?

ಈ ಸುದ್ದಿಯನ್ನು ಶೇರ್ ಮಾಡಿ

D-Murder

ಬೆಂಗಳೂರು, ಸೆ. 29- ವಸಂತನಗರ ದಲ್ಲಿ ನಡೆದಿದ್ದ ಅತ್ತೆ- ಸೊಸೆ ಕೊಲೆಗೆ ಲೇವಾದೇವಿ ವ್ಯವಹಾರವೇ ಮುಳುವಾಯಿತೇ…? ಹೌದು ಎನ್ನುತ್ತಿದೆ ಪೊಲೀಸ್ ಮೂಲಗಳು. ಆರು ವರ್ಷದ ಹಿಂದೆ ಪರಿಚಯವಾಗಿದ್ದ ಗಿರವಿ ವ್ಯಾಪಾರಿ ಮನೀಷ್ ಎಂಬ ವ್ಯಕ್ತಿಯಿಂದ ಕೆಮಿಕಲ್ ವ್ಯಾಪಾರಿ ಸಂಪತ್‌ರಾಜ್ ಆಭರಣಗಳನ್ನು ಅಡವಿಟ್ಟುಕೊಳ್ಳದಿದ್ದರೆ ಈ ಘೋರ ಘಟನೆ ನಡೆಯುತ್ತಿರಲಿಲ್ಲವೇನೋ..? ಸಂಪತ್‌ರಾಜ್ ಅಡವಿಟ್ಟುಕೊಂಡಿದ್ದ ಆಭರಣಗಳನ್ನು ಹಣ ಕೊಡದೆ ವಾಪಸ್ ಕೊಡುವುದಿಲ್ಲವೆಂದು ಅರಿತ ಮನೀಷ್ ಸಂಕಷ್ಟಕ್ಕೆ ಸಿಲುಕಿ ಹಣ, ಆಭರಣ ದೋಚಲು ಸ್ನೇಹಿತನೊಂದಿಗೆ ಸಂಚು ರೂಪಿಸಿದ್ದ. ಅದರಂತೆ ಸೆಪ್ಟೆಂಬರ್ 26 ರಂದು ಸಂಪತ್‌ರಾಜ್ ಅವರು ಮಗನೊಂದಿಗೆ ಅಂಗಡಿಗೆ ತೆರಳಿದ್ದಾಗ ಆರೋಪಿ ಮನೀಷ್ ತನ್ನ ಸ್ನೇಹಿತ ಮಹೇಂದರ್‌ಸಿಂಗ್ ಎಂಬಾತನೊಂದಿಗೆ ಅವರ ಮನೆ ಬಳಿ ಬಂದು ಸ್ನೇಹಿತನನ್ನು ಹೊರಗೆ ನಿಲ್ಲಿಸಿ ಕಾಲಿಂಗ್ ಬೆಲ್ ಒತ್ತಿದ್ದಾನೆ.

ಸಂಪತ್‌ರಾಜ್ ಅವರ ಪತ್ನಿ ಸಂತೋಷಿ ಬಾಯಿ ಅವರು ಬಾಗಿಲು ತೆಗೆಯುತ್ತಿದ್ದಂತೆ ಹಣ, ಆಭರಣ ಕೊಡುವಂತೆ ಧಮ್ಕಿ ಹಾಕಿದ್ದಾನೆ. ಇದನ್ನು ನಿರಾಕರಿಸಿದಾಗ ಅವರಿಗೆ ಮಾರಕಾಸ್ತ್ರದಿಂದ ಹೊಡೆದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಗಲಾಟೆ ಶಬ್ದ ಕೇಳಿ ಕೊಠಡಿಯಲ್ಲಿದ್ದ ಸೊಸೆ ಲತಾ ಬರುತ್ತಿದ್ದಂತೆ ಅವರಿಗೂ ಹಣ, ಆಭರಣ ಕೊಡುವಂತೆ ಬೆದರಿಸಿದ್ದಾನೆ. ಅವರು ಕೊಡಲು ನಿರಾಕರಿಸಿದಾಗ ಅದೇ ಆಯುಧದಿಂದ ಅವರ ಕತ್ತು ಕೊಯ್ದು ಕೊಲೆ ಮಾಡಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿ ಹೊರಗೆ ನಿಂತಿದ್ದ ಸ್ನೇಹಿತನೊಂದಿಗೆ ಪರಾರಿಯಾಗಿದ್ದನು.

ಈ ಪ್ರಕರಣ ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿಬೀಳಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ಮನೆಯವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಇವರ ಬಳಿ ಅಡವಿಟ್ಟಿದ್ದ ವ್ಯಕ್ತಿಯ ಜಾಡು ಹಿಡಿದು ತನಿಖೆ ಕೈಗೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಅನೀಷ್ ಲೇವಾದೇವಿ ವ್ಯವಹಾರ ನಡೆಸುತ್ತಿದ್ದು , ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿ ಅದರಲ್ಲಿ ನಷ್ಟ ಉಂಟಾದ ಪರಿಣಾಮ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ಹಣ ಕೊಡದೆ ತಾನೇ ಬಳಸಿಕೊಂಡಿದ್ದ . ಅಡವಿಟ್ಟಿದ್ದ ಗ್ರಾಹಕರು ತಮ್ಮ ಆಭರಣ ವಾಪಸ್ ಕೊಡುವಂತೆ ಒತ್ತಡ ಹಾಕಿದಾಗ ಬೇರೆ ದಾರಿ ಕಾಣದೆ ಈ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದಾನೆ.  ಈತನೊಂದಿಗೆ ಸ್ನೇಹಿತ ಮಹೇಂದ್ರಸಿಂಗ್ ಹಾಗೂ ಕದ್ದ ಹಣ, ಆಭರಣಗಳನ್ನು ಬಚ್ಚಿಟ್ಟಿದ್ದ ಬಾಮೈದುನ ದೇವರಾಮ್‌ನನ್ನು ಪೊಲೀಸರು ಬಂಸಿದ್ದು ಈ ಮೂವರನ್ನು ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಹಾಜರು ಪಡಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin