ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಬಗ್ಗೆ ವಿಶೇಷ ಮಾಹಿರಿ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

arjuna
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂ ಸವಾರಿಗೆ ಅದರದೇ ಆದ ವೈಶಿಷ್ಟ್ಯವಿದೆ. ಇದಕ್ಕೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಗಳನ್ನು ಸಿದ್ಧತೆ ಮಾಡುವ ವೈಖರಿಯೇ ಒಂದು ವಿಶಿಷ್ಟವಾದುದು.ದಸರಾ ಸಮೀಪಿಸುತ್ತಿದ್ದಂತೆ ಮೈಸೂರು ಸುತ್ತಮುತ್ತಲ ವಿವಿಧ ಕಾಡಿನಲ್ಲಿರುವ ಗಜರಾಜರನ್ನು ಕರೆಸಿ ಗಜ ಪಯಣಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ನಡೆಸಲಾಗುತ್ತದೆ.ಒಟ್ಟು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳಲ್ಲಿ ಮೊದಲ ಹಂತದಲ್ಲಿ ಕೆಲವನ್ನು, ಎರಡನೆ ಹಂತದಲ್ಲಿ ಕೆಲವನ್ನು ಕಾಡಿನಿಂದ ನಾಡಿಗೆ ಬರಮಾಡಿಕೊಂಡು ಅಂಬಾರಿ ಹೊರುವ ಅರ್ಜುನ ಸೇರಿದಂತೆ ಇನ್ನಿತರ ಆನೆಗಳಿಗೆ ವಿಶೇಷ ಖಾದ್ಯ ಹಾಗೂ ತರಬೇತಿ ನೀಡಿ ಸಿದ್ಧಗೊಳಿಸುವುದು ವಾಡಿಕೆ.ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ತೂಕ, ಸಾಮಥ್ರ್ಯ ಎಲ್ಲವೂ ಪರಿಗಣಿಸುವುದರೊಂದಿಗೆ ಅವುಗಳ ಸ್ವಭಾವವನ್ನು ಆಧರಿಸಿ ಜಂಬೂ ಸವಾರಿಯಂತಹ ವಿಶಿಷ್ಟ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

ಈ ಆನೆಗಳ ಒಂದಿಷ್ಟು ವಿವರ ಹೀಗಿದೆ:

ಅರ್ಜುನ: ಕಳೆದ ಮೂರು ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರುವ ಕಾಯಕವನ್ನು ಅರ್ಜುನ ಪಾಲಿಸಿಕೊಂಡು ಬರುತ್ತಿದ್ದಾನೆ. ಈ ಬಾರಿಯೂ ಸಹ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಹಾಕಿ ಈತನನ್ನು ಸೆರೆಹಿಡಿಯಲಾಗಿತ್ತು. 56 ವರ್ಷದ ಅರ್ಜುನ 2.95 ಮೀಟರ್ ಎತ್ತರವಿದ್ದು, 3.75 ಮೀಟರ್ ಉದ್ದವಿದ್ದಾನೆ. 5,615 ಕೆಜಿ ತೂಕವಿರುವ ಈತ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರದ ವಾಸಿ.ಸಣ್ಣಪ್ಪ, ವಿನು ಮಾವುತರಾಗಿ ಈತನನ್ನು ನೋಡಿಕೊಳ್ಳುತ್ತಿದ್ದಾರೆ.

ವಿಜಯಾ :

ಮಡಿಕೇರಿಯ ಕುಶಾಲನಗರ ವಲಯದ ಆನೆ ಕಾಡಿನ ಆನೆ ಶಿಬಿರದ ವಾಸಿಯಾಗಿರುವ ವಿಜಯಾ ಅಂಬಾರಿ ಹೊರುವ ಅರ್ಜುನನಿಗೆ ಕುಮ್ಕಿಯಾಗಿ ಈ ಹೆಣ್ಣಾನೆ ಕರ್ತವ್ಯ ನಿರ್ವಹಿಸುತ್ತಿದೆ.59 ವರ್ಷದ ಈ ಆನೆ ಕಳೆದ ಒಂಬತ್ತು ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಹಿಡಿಯಲಾಗಿತ್ತು.ಮೃದು ಸ್ವಭಾವದ ವಿಜಯಾ 2.29 ಎತ್ತರವಿದ್ದು, 3 ಮೀಟರ್ ಉದ್ದವಿದ್ದು, 2635 ಕೆಜಿ ತೂಕ ಹೊಂದಿದ್ದಾಳೆ.ಈಕೆಗೆ ಭೋಜಪ್ಪ ಮಾವುತನಾದರೆ, ದೊರೆಯಪ್ಪ ಕಾವಾಡಿಗನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾವೇರಿ:

ದುಬಾರೆ ಆನೆ ಶಿಬಿರದ ವಾಸಿಯಾಗಿರುವ ಈ ಕಾವೇರಿ 2009ರಲ್ಲಿ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕಿತ್ತು.38 ವರ್ಷದ ಕಾವೇರಿ ಎಂಬ ಹೆಣ್ಣಾನೆ 3005 ಕೆಜಿ ತೂಕವಿದೆ. 2.50 ಮೀಟರ್ ಎತ್ತರ, 3.32 ಮೀಟರ್ ಉದ್ದವಿದೆ. ಸತತ 5ನೆ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕಾವೇರಿ, ಅಂಬಾರಿ ಹೊರುವ ಅರ್ಜುನನಿಗೆ ಕುಮ್ಕಿ ಆನೆಯಾಗಿ ಹೊಣೆ ನಿರ್ವಹಿಸುತ್ತಿದೆ.ಧೋಬಿ ಮಾವುತನಾಗಿದ್ದರೆ, ರಘು ಕಾವಾಡಿಗನಾಗಿ ಇದನ್ನು ನೋಡಿಕೊಳ್ಳುತ್ತಿದ್ದಾರೆ.

ಅಭಿಮನ್ಯು:

ಕಳೆದ 17 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಲ್ಲೇ ಪ್ರಮುಖನೆನಿಸಿದ್ದಾನೆ. ಹೆಸರಿನಂತೆ ಬಲಶಾಲಿಯಾದ ಅಭಿಮನ್ಯು 4,853 ಕೆಜಿ ತೂಕ ಹೊಂದಿದ್ದು, 2.68 ಮೀಟರ್ ಎತ್ತರ, 3.51 ಮೀಟರ್ ಉದ್ದ ಇದ್ದಾನೆ.1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಿದ್ದ ಈತನನ್ನು ಪುಂಡಾಟಿಕೆ ಮಾಡುವ ಆನೆಗಳನ್ನು ಹಿಮ್ಮೆಟ್ಟಿಸಲು ಹಾಗೂ ಸೆರೆ ಹಿಡಿಯಲು ಬಳಸಲಾಗುತ್ತಿದೆಯಲ್ಲದೆ, ಆನೆಗಳ ಪಳಗಿಸುವ ಕಲೆಯಲ್ಲೂ ಇವನ ಬಳಕೆ ಮಾಡಲಾಗುತ್ತಿದೆ. ಆನೆ ಗಾಡಿಯನ್ನು ಎಳೆಯುವ ಕರ್ತವ್ಯ ನಿಭಾಯಿಸುತ್ತಿದ್ದ ಅಭಿಮನ್ಯು, 2 ವರ್ಷಗಳಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದಾನೆ. ನಾಗರಹೊಳೆ ಕಲ್ಲಹಳ್ಳ ವಲಯದ ಮೂರ್ಕಲ್ ಆನೆ ಶಿಬಿರದಲ್ಲಿ ನೆಲೆಸಿದ್ದಾನೆ.ವಸಂತ ಮಾವುತನಾಗಿದ್ದರೆ, ರಾಜು ಕಾವಾಡಿಗನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ಬಲರಾಮ :

ಸತತವಾಗಿ 14 ವರ್ಷ ಅಂಬಾರಿ ಹೊತ್ತು ಮೆಚ್ಚುಗೆ ಗಳಿಸಿದ್ದ ಬಲರಾಮ ಇದೀಗ ನಿಶಾನೆ ಆನೆಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾನೆ.ದಸರಾ ಆನೆಗಳಲ್ಲೇ ಅತ್ಯಂತ ಪ್ರೀತಿಪಾತ್ರನೆನಿಸಿರುವ ಬಲರಾಮ 4,920 ಕೆಜಿ ತೂಕವಿದ್ದು, 58 ವರ್ಷದವನಾಗಿದ್ದಾನೆ. 2.7 ಮೀಟರ್ ಎತ್ತರ, 3.70 ಮೀಟರ್ ಉದ್ದ ಇದ್ದಾನೆ. ಕಳೆದ 19 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಕೀರ್ತಿಯೂ ಇವನದು. ಈ ಹಿಂದೆ ಅಂಬಾರಿ ಹೊರುತ್ತಿದ್ದ ದ್ರೋಣನ ಅಕಾಲಿಕ ನಿಧನದ ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಬಲರಾಮ ನಿರ್ವಹಿಸಿದ್ದನು.1988ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಅತ್ಯಂತ ಬಲಶಾಲಿಯಾಗಿದ್ದರಿಂದ ದಸರಾ ಮಹೋತ್ಸವದಲ್ಲಿ ಬಳಸಿಕೊಳ್ಳಲಾಗುತ್ತಿತ್ತು.ಕಳೆದ ನಾಲ್ಕು ವರ್ಷದಿಂದಷ್ಟೇ ಅಂಬಾರಿ ಹೊರುವ ಕಾಯಕದಿಂದ ಮುಕ್ತನಾಗಿ ನಿಶಾನೆ ಆನೆಯಾಗಿದ್ದಾನೆ. ನಾಗರಹೊಳೆಯ ಮತ್ತಿಗೋಡು (ತಿತಿಮತಿ) ವಲಯದ ಗಾಡಿಪಾಳ್ಯ ಆನೆ ಶಿಬಿರದ ನಿವಾಸಿ ಈ ಬಲರಾಮ.ಈತನಿಗೆ ತಿಮ್ಮ ಮಾವುತನಾಗಿದ್ದು, ಗೋಪಾಲ ಕಾವಾಡಿಗನಾಗಿದ್ದಾನೆ.

ವಿಕ್ರಮ:

ಕಳೆದ 12 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ 43 ವರ್ಷದ ವಿಕ್ರಮ, 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕಿದ್ದ. ಈತ 2.60 ಮೀಟರ್ ಎತ್ತರ, 3.43 ಮೀಟರ್ ಉದ್ದವಾಗಿದ್ದು, 3,820 ಕೆಜಿ ತೂಕವುಳ್ಳವನಾಗಿದ್ದಾನೆ. ದುಬಾರೆ ಆನೆ ಶಿಬಿರದ ಅತಿಥಿಯಾದ ಈತ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿ ನಿರ್ವಹಿಸಲು ಮುಂದಾಗಿದ್ದಾನೆ. ಹಾಗಾಗಿ ಅರಮನೆಯಲ್ಲಿ ನವರಾತ್ರಿಯ ಒಂಭತ್ತೂ ದಿನಗಳು ಬೆಳಗ್ಗೆ ಹಾಗೂ ಸಂಜೆ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ದಕ್ಕಿಸಿಕೊಂಡಿದ್ದಾನೆ.

ಹರ್ಷ :

ಕುಶಾಲನಗರ ವಲಯದ ದುಬಾರೆ ಆನೆ ಶಿಬಿರದಲ್ಲಿರುವ 49ರ ವರ್ಷದ ಹರ್ಷ. 2.55 ಮೀಟರ್ ಎತ್ತರವಿದ್ದು, 3.40 ಮೀ. ಉದ್ದವಿದ್ದಾನೆ. 3,280 ಕೆಜಿ ತೂಕವಿರುವ ಹರ್ಷನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಶಕ್ತಿಶಾಲಿ ಹರ್ಷನನ್ನು ಕಳೆದ 14 ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.ಈ ಆನೆಗೆ ಚಿಕ್ಕ ಎಂಬ ಮಾವುತ ಹಾಗೂ ಅಶೋಕ ಎಂಬ ಕಾವಾಡಿಗನ ನಿಗಾವಣೆಯಲ್ಲಿಡಲಾಗಿದೆ.

ಗೋಪಾಲಸ್ವಾಮಿ:

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಹಳ್ಳ ವಲಯದ ಮೂರ್ಕಲ್ ಆನೆ ಶಿಬಿರದ ವಾಸಿ ಈ ಗೋಪಾಲಸ್ವಾಮಿ.ಮೂವತ್ನಾಲ್ಕು ವರ್ಷದ ಈ ಆನೆ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ 2009ರಲ್ಲಿ ಸೆರೆ ಸಿಕ್ಕಿತ್ತು. 2.62 ಮೀಟರ್ ಎತ್ತರ, 3.42 ಮೀಟರ್ ಉದ್ದವಿರುವ ಗೋಪಾಲಸ್ವಾಮಿ 3,242 ಕೆಜಿ ತೂಕ ಹೊಂದಿದ್ದಾನೆ. ಶಾಂತ ಸ್ವಭಾವದ ಈ ಆನೆಯನ್ನು ಕಳೆದ ಐದು ವರ್ಷದಿಂದ ದಸರಾ ಮಹೋತ್ಸವದಲ್ಲಿ ಬಳಸಲಾಗುತ್ತಿದೆ. ಸೃಜನ್ ಎಂಬ ಮಾವುತ ದಾಸ ಎಂಬ ಕಾವಾಡಿಗನಾಗಿ ಗೋಪಾಲಸ್ವಾಮಿಯ ಕೆಲಸ ನಿರ್ವಹಿಸುತ್ತಿದ್ದಾರೆ.

ಗೋಪಿ:

ಕುಶಾಲನಗರ ವಲಯದ ದುಬಾರೆ ಆನೆ ಶಿಬಿರದಲ್ಲಿರುವ ಗೋಪಿ ಕಳೆದ ಆರು ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, 2.92 ಮೀಟರ್ ಎತ್ತರ, 3.42 ಮೀಟರ್ ಉದ್ದವಿರುವ ಈ ಆನೆ 3,710 ಕೆಜಿ ತೂಕವಿದೆ. 1993ರಲ್ಲಿ ಕಾರ್ಯಕೊಪ್ಪ ಅರಣ್ಯ ಪ್ರದೇಶದಲ್ಲಿ ಸಿಕ್ಕಿದ್ದ ಈ ಆನೆಯನ್ನು ಪಳಗಿಸಿ ದುಬಾರೆ ಆನೆ ಶಿಬಿರದಲ್ಲಿ ಸಫಾರಿಯಾಗಿ ಬಳಸಲಾಗುತ್ತಿದೆ.ಶೇರಿ ಮಾವುತ ಹಾಗೂ ಅಪ್ಪಯ್ಯ ಕಾವಾಡಿಗನಾಗಿ ಇದನ್ನು ನೋಡಿಕೊಳ್ಳುವ ಉಸ್ತುವಾರಿ ಹೊತ್ತಿದ್ದಾರೆ.

ಗಜೇಂದ್ರ:

ಅತ್ಯಂತ ಸೌಮ್ಯಸ್ವಭಾವದ ಆನೆಯೆಂದೇ ಹೆಸರಾಗಿರುವ ಗಜೇಂದ್ರ ಕಳೆದ 17 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಈತನನ್ನು ಹಿಡಿಯಲಾಗಿತ್ತು.61ವರ್ಷದ ಗಜೇಂದ್ರ 4,620 ಕೆಜಿ ತೂಕವಿದ್ದು, 2.94 ಮೀಟರ್ ಎತ್ತರ, 3.80 ಮೀಟರ್ ಉದ್ದ ಇದ್ದಾನೆ. ಈತ ಎರಡು ವರ್ಷದ ಹಿಂದೆ ಮದವೇರಿ ಮಾವುತ ಹಾಗೂ ಶ್ರೀರಾಮ ಆನೆಯನ್ನು ಕೊಂದ ಅಪಕೀರ್ತಿ ಪಡೆದು ದಸರಾ ಮಹೋತ್ಸವದಿಂದಲೇ ಹೊರಗುಳಿದಿದ್ದ.ಆದರೆ ಈ ಬಾರಿ ಮತ್ತೆ ಅವಕಾಶ ನೀಡಲಾಗಿದ್ದು, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿದ್ದಾನೆ.ಚಾಮರಾಜನಗರದ ಬಿಳಿಗಿರಿರಂಗನಬೆಟ್ಟ, ಹುಲಿ ಸಂರಕ್ಷಿತ ಪ್ರದೇಶ ಕೆ.ಗುಡಿ ಆನೆ ಶಿಬಿರದ ವಾಸಿಯಾಗಿದ್ದಾನೆ. ಈತನಿಗೆ ಶಂಕರ ಎಂಬ ಮಾವುತ, ಸುನೀಲ ಎಂಬ ಕಾವಾಡಿಗ ನೋಡಿಕೊಳ್ಳುತ್ತಿದ್ದಾರೆ.

ಪ್ರಶಾಂತ:

ದುಬಾರೆ ಆನೆ ಶಿಬಿರದ ಮತ್ತೊಬ್ಬ ನಿವಾಸಿಯಾಗಿರುವ ಪ್ರಶಾಂತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 60ವರ್ಷದವನಾದ ಪ್ರಶಾಂತ 2.61 ಮೀಟರ್ ಎತ್ತರ, 3.46 ಮೀಟರ್ ಉದ್ದ ಹೊಂದಿದ್ದಾನೆ. 4,229 ಕೆಜಿ ತೂಕದವನಾಗಿದ್ದು, 1993ರಲ್ಲಿ ಕಾರ್ಯಕೊಪ್ಪ ಸೆರೆ ಹಿಡಿಯಲಾಗಿತ್ತು.ಬಲಿಷ್ಠ ಆನೆಯಾಗಿರುವ ಪ್ರಶಾಂತ ವಿವಿಧ ಸಭೆ , ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾನೆ. ಕಳೆದ 10 ವರ್ಷದಿಂದ ದಸರಾ ಮಹೋತ್ಸವದಲ್ಲಿ ಸಾಗುತ್ತಿದ್ದಾನೆ.

ದುರ್ಗಾ ಪರಮೇಶ್ವರಿ:

49 ವರ್ಷದ ಹೆಣ್ಣಾನೆ ದುರ್ಗಾಪರಮೇಶ್ವರಿ, 2.41 ಮೀಟರ್ ಎತ್ತರ, 3.21 ಮೀಟರ್ ಉದ್ದವಿದ್ದು, 3500 ಕೆಜಿ ತೂಕವಿದೆ. 1972ರಲ್ಲಿ ಮಡಿಕೇರಿ ವಿಭಾಗದ ದುಬಾರೆ ಅರಣ್ಯ ಪ್ರದೇಶದಲ್ಲಿ ಗುಂಡಿಗೆ ಬೀಳಿಸಿ ಇದನ್ನು ಹಿಡಿಯಲಾಗಿತ್ತು.ಕಳೆದ ನಾಲ್ಕು ವರ್ಷದಿಂದ ದಸರಾ ಮಹೋತ್ಸವದಲ್ಲಿ ಹೆಜ್ಜೆ ಹಾಕುತ್ತಿರುವ ಈ ಆನೆ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ಆನೆ ಶಿಬಿರದಲ್ಲಿ ನೆಲೆಸಿದ್ದಾಳೆ. ಅಣ್ಣು ಮಾವುತನಾಗಿ, ಮಹದೇವ ಕಾವಾಡಿಗನಾಗಿ ದುರ್ಗಾ ಪರಮೇಶ್ವರಿಯನ್ನು ನೋಡಿಕೊಳ್ಳುವ ಕೈಂಕರ್ಯ ನೆರವೇರಿಸುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin