ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Belagavi-1

ಬೆಂಗಳೂರು,ಅ.3- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ತರುವ ಹೆಗ್ಗುರಿಯೊಂದಿಗೆ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಇಂದಿನಿಂದ ಆರಂಭವಾಯಿತು. ಬೆಳಗಾವಿಯ ಧರ್ಮನಾಥ ಭವನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ಪಕ್ಷದ ಸಂಘಟನೆ, ಇತ್ತೀಚಿನ ಬೆಳವಣಿಗೆಗಳು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯವಾಗಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ನಡುವೆ ವೈಮನಸ್ಸು ಮೂಡಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಭಾರೀ ಬಿರುಸಿನ ಚರ್ಚೆ ನಡೆಯುವ ಸಂಭವವಿದೆ.

Belagavi-2 ಎರಡು ದಿನಗಳ ಹಿಂದೆಯಷ್ಟೇ ಹಾವೇರಿಯಲ್ಲಿ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಸಿ ಪರೋಕ್ಷವಾಗಿ ಯಡಿಯೂರಪ್ಪನವರನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದರು. ಇದೂ ಕೂಡ ಕಾರ್ಯಕಾರಿಣಿಯಲ್ಲಿ ಪ್ರತಿಧ್ವನಿಸುವ ಸಂಭವವಿದೆ. ಇನ್ನು ಕಾರ್ಯಕಾರಿಣಿಯಲ್ಲಿ ಪಕ್ಷದ ಸಂಘಟನೆ, ಸದಸ್ಯರ ನೋಂದಾವಣಿ, ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಆದ್ಯತೆ ನೀಡುವ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಲಿದೆ. ಪದಾಧಿಕಾರಿಗಳ ನೇಮಕಾಗಿ ನಡೆದ ಬಳಿಕ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗತ್ಜಾಹೀರವಾಗಿದೆ. ಪದಾಧಿಕಾರಿಗಳ ಆಯ್ಕೆಯಲ್ಲಿ ಯಡಿಯೂರಪ್ಪ ತಮ್ಮ ಆಪ್ತರಿಗೆ ಮಣೆಹಾಕಿದ್ದಾರೆ ಎಂಬುದು ಈಶ್ವರಪ್ಪನವರ ಆರೋಪವಾಗಿದೆ. ಇದು ಕೊನೆಗೆ ದೆಹಲಿ ಅಂಗಳಕ್ಕೂ ತಲುಪಿತ್ತು.
ನಾಳೆ ಕೊನೆಯ ದಿನವಾಗಿದ್ದು, ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ರಾಮ್‍ಲಾಲ್ ಸಮಾರೋಪ ಸಮಾರಂಭದ ಭಾಷಣ ಮಾಡಲಿದ್ದಾರೆ.

Belagavi-4

ಪಕ್ಷದೊಳಗೆ ಎರಡು ಬಣಗಳಾಗಿರವುದರಿಂದ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ಸಂಘಟನೆಗೆ ಆದ್ಯತೆ ನೀಡಬೇಕೆಂದು ರಾಮ್‍ಲಾಲ್ ನಿರ್ದೇಶನ ನೀಡಲಿದ್ದಾರೆ.
ಉಳಿದಂತೆ ರಾಜ್ಯ ಉಸ್ತುವಾರಿ ಮುರುಳೀದರ ರಾವ್, ಸಂಘಟನೆಯ ಸಹ ಕಾರ್ಯದರ್ಶಿ ಸಂತೋಷ್, ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಡಿ.ವಿ.ಸದಾನಂದಗೌಡ, ಸಂಸದರು, ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಮೋರ್ಚಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ, ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಪಕ್ಷದ ಬೆಳವಣಿಗೆ, ಸಂಘಟನೆ, ಮಹದಾಯಿ, ಕಾವೇರಿ, ಗಡಿ ರಕ್ಷಣೆ ಸೇರಿದಂತೆ ಹಲವು ವಿಷಯಗಳ ನಡುವೆ ಚರ್ಚಿಸುವುದಾಗಿ ತಿಳಿಸಿದರು.

Belagavi-5

ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ವಾಸ್ತವದ ಬಗ್ಗೆ ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ವಕೀಲರ ತಂಡ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಮಂಡಲದಲ್ಲಿ ಇಂದು ನಡೆಯಲಿರುವ ಅಧಿವೇಶನದ ವೇಳೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಮೊದಲಿಂದಲೂ ನಾವು ರಾಜ್ಯದ ಹಿತಾಸಕ್ತಿ ಪರವಾಗಿಯೇ ಇದ್ದೇವೆ ಎಂದರು. ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಯಾವುದೇ ಕಾರಣಕ್ಕೂ ಕಾವೇರಿಕೊಳ್ಳದಿಂದ ತಮಿಳುನಾಡಿಗೆ ಒಂದು ಹನಿ ನೀರು ಬಿಡಬಾರದು. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮಲ್ಲೇ ನೀರಿಲ್ಲದೇ ಇರುವಾಗ ನೆರೆ ರಾಜ್ಯಕ್ಕೆ ನೀರು ಬಿಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು.

Belagavi-7

ಜನಸಾಮಾನ್ಯರ ಜೀವನ ಸುಧಾರಿಸಲು ಪಕ್ಷ ಬದ್ಧ : ಮುರಳೀಧರರಾವ್

ಬೆಳಗಾವಿ, ಅ.3-ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡಲು ಪಕ್ಷ ಸಿದ್ಧ. ಜನತೆಯ ಯೋಗಕ್ಷೇಮ ಜನಸಾಮಾನ್ಯರ ಜೀವನ ಸುಧಾರಿಸಲು ಪಕ್ಷ ಬದ್ಧ ಎಂದು ಬಿಜೆಪಿ ಹಿರಿಯ ನಾಯಕ ಮುರಳೀಧರರಾವ್ ಹೇಳಿದರು. ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಸರ್ಕಾರ ರಾಜಕಾರಣ ಮಾಡುತ್ತಿದೆ. ಕಾರಣ ನ್ಯಾಯಾಲಯದಲ್ಲಿ ಸಮಸ್ಯೆ ಹಾಗೇ ಉಳಿದಿದೆ ಎಂದರು. ರಾಜ್ಯದ ರೈತರು ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಳಜಿ ಇಲ್ಲ ಎಂದು ದೂರಿದರು. ಪ್ರಧಾನಿ ಮೋದಿ ಅವರು ಸಮಸ್ಯೆ ಬಗೆಹರಿಸಲು ಸಿದ್ಧರಿದ್ದರು. ಆದರೆ ಈ ವಿವಾದ ಸುಪ್ರೀಂ ಅಂಗಳದಲ್ಲಿ ಇರುವುದರಿಂದ ಹಿನ್ನಡೆಯಾಯಿತು ಎಂದರು.

ಪಾಕ್‍ನೊಂದಿಗೆ ಕೇಂದ್ರ ಒಳ್ಳೆಯ ಸಂಬಂಧವಿರಿಸಿಕೊಳ್ಳಲು ಬಯಸುತ್ತಿದೆ. ಆದರೆ ಪಾಕ್ ಕಾಲು ಕೆರೆದು ಭಾರತದೊಂದಿಗೆ ಜಗಳ, ರಕ್ತಪಾತ ನಡೆಸಿದೆ ಎಂದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಕಾವೇರಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಈ ವಿವಾದವನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರು ಉತ್ಸುಕರಾಗಿದ್ದಾರೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

Belagavi-3

ಉಪ್ರ-ಗುಜರಾತ್ ಗೋವಾ ಚುನಾವಣೆ ಬಿಜೆಪಿ ಮೇಲುಗೈ: ಸೀತಾರಾಮನ್

ಬೆಳಗಾವಿ, ಅ.3-ಮುಂಬರುವ ಉತ್ತರ ಪ್ರದೇಶ, ಗೋವಾ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಬೆಳಗಾವಿಯಲ್ಲಿಂದು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರಲ್ಲದೆ, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಜ್ಜಾಗಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ. ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ ಎಂದು ದೂರಿದರು.

ಸಂಸದೆ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವ ಡಿ.ವಿ.ಸದಾನಂಗೌಡ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ,ಶಾಸಕ ಸಂಜಯ ಪಾಟೀಲ, ನಟಿ ಶೃತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Belagavi-6

► Follow us on –  Facebook / Twitter  / Google+

Facebook Comments

Sri Raghav

Admin