ಕಣ್ಮನ ತಣಿಸುವ ಪಟ್ಟದ ಗೊಂಬೆಗಳು

ಈ ಸುದ್ದಿಯನ್ನು ಶೇರ್ ಮಾಡಿ

GOMBHE

ದಸರಾ ಎಂದೊಡನೆ ನೆನಪಿಗೆ ಬರುವ ಮೈಸೂರು ಅರಮನೆ ಜಂಬೂಸವಾರಿ, ಪಂಜಿನ ಕವಾಯಿತುಗಳೊಡನೆ ಗೊಂಬೆ ಪ್ರದರ್ಶನವೂ ಸಂಪ್ರದಾಯವೇ ಸರಿ. ದಸರೆಯ ಸಂದರ್ಭದಲ್ಲಿ ನಾಡಿನ ಮನೆ ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸಿ ಸಾಲುಸಾಲಾಗಿ ಪ್ರದರ್ಶಿಸುವ ಪದ್ಧತಿಯಿದೆ. ಅವುಗಳಲ್ಲಿ ಮುಖ್ಯವಾದದ್ದು ಪಟ್ಟದ ಗೊಂಬೆ. ಅಂದರೆ ರಾಜ ಮತ್ತು ರಾಣಿಯ ಗೊಂಬೆ. ಅಯ್ಯಂಗಾರರರು ಇದನ್ನು ಪಟ್ಟದ ಕೋಲು ಎಂತಲೂ ಕರೆಯುತ್ತಾರೆ. ಬಹುಶಃ ಗೊಂಬೆಗಳ ನೀಳಾಕಾರ ಕಾರಣವಿರಬಹುದು. ಸಾಮಾನ್ಯವಾಗಿ ಈ ಪಟ್ಟದ ಗೊಂಬೆಗಳನ್ನು ಚಂದನ ಅಥವಾ ರೋಸ್ ಮರದಿಂದ ತಯಾರಿಸುತ್ತಾರೆ.

ಅದರ ಕೆತ್ತನೆಯೇ ಒಂದಷ್ಟು ವಿಶಿಷ್ಟ. ಇವನ್ನು ಸಾಮಾನ್ಯವಾಗಿ ಇಂದಿಗೂ ಮದುವೆಯ ಸಂದರ್ಭದಲ್ಲಿ ಮಧುಮಗಳಿಗೆ ತಂದೆ-ತಾಯಿಗಳು ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ಇಲ್ಲಿ ನೀವು ನೊಡುತ್ತಿರುವ ಪಟ್ಟದ ಗೊಂಬೆಗಳಿಗೆ ಸರಿಸುಮಾರು 250 ವರ್ಷಗಳ ಇತಿಹಾಸವಿದೆ. ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ವಿಜಯಲಕ್ಷ್ಮಿ ರಿಗ್ರೆಟ್ ಅಯ್ಯರ್ ಅವರು ತಮ್ಮ ಮನೆಯಲ್ಲಿ ಪ್ರತಿ ನವರಾತ್ರಿ ಅಂಗವಾಗಿ ಜೋಡಿಸಿಟ್ಟಿರುವ ಗೊಂಬೆಗಳು ಈ ಸಲದ ವಿಶೇಷ.

ಅಲಂಕಾರ:

ಈ ಮರದ ಗೊಂಬೆಗಳಿಗೆ ನಾಜೂಕಾಗಿ ವಸ್ತ್ರ ವಿನ್ಯಾಸ ಮಾಡಲಾಗಿದೆ. ಕುಸುರಿ ಕೆತ್ತನೆಯ ಗೊಂಬೆಗಳಿಗೆ ನಾಜೂಕಾಗಿ ಅಲಂಕಾರಿಕ ಸರ, ಓಲೆ, ಮೂಗುತಿ, ಮಾಂಗಲ್ಯ ಸಹಿತವಾಗಿ ಶ್ರದ್ಧೆಯಿಂದ ಸಿದ್ಧಪಡಿಸಿ ಜೋಪಾನವಾಗಿ ತೊಡಿಸಿ ಅಲಂಕರಿಸಲಾಗಿದೆ. ಪ್ರತಿ ಬಾರಿ ಇವರು ಒಂದಿಲೊಂದು ವಿಶೇಷ ಗೊಂಬೆಗಳನ್ನು ಇಡುತ್ತಿದಾರೆ.

 

ಈ ಸಲದ ವಿಶೇಷ:
* ಆರೂವರೆ ಅಡಿಗಳ ಎತ್ತರ ಮತ್ತು ಎರಡು ಅಡಿ ಅಗಲವಿರುವ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ವಿಶೇಷವಾಗಿ ನಿರ್ಮಿಸಿ ಅಲಂಕರಿಸಲಾಗಿದೆ.
* ಮೂರು ಅಡಿಗಳ ಎತ್ತರ ಒಂದೂವರೆ ಅಡಿಗಳ ಅಗಲದ ಶ್ರೀ ಮಹಾಲಕ್ಷ್ಮಿ ಅಮ್ಮನವರ ವಿಗ್ರಹ ಕೈ ಕೆಲಸದಿಂದ ನಿರ್ಮಿಸಿ ಸುಂದರವಾಗಿ ಅಲಂಕರಿಸಲಾಗಿದೆ.
* ವಿಶೇಷವಾಗಿ ಅಲಂಕರಿಸಿರುವ ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯ ಮತ್ತು ಅವರ ಕುಟುಂಬ ವರ್ಗ.
* ವಜ್ರಾಂಗಿ ಅಲಂಕೃತ ಲಕ್ಷ್ಮೀನಾರಾಯಣ ವಿರೂಪಾಕ್ಷಿ ಸ್ವಾಮಿ ಮತ್ತು ಅಮ್ಮನವರು.
ಇನ್ನು ನಾವಿಬ್ಬರು, ನಮಗಿಬ್ಬರು ಎಂಬಂತೆ ಗಂಡು-ಹೆಣ್ಣು ಮತ್ತು ನಾಲ್ಕು ಮಕ್ಕಳ ಪರಿವಾರ (ಪಟ್ಟದ ಗೊಂಬೆಗಳಲ್ಲಿ).
ಇನ್ನು ಗಂಡ-ಹೆಂಡತಿ ಮತ್ತು ಅವ ರಿಗೊಂದು ಮಗು ಎಂಬಂತೆ ಅಲಂಕರಿಸಿದ ನ್ಯಾನೋ ಪಟ್ಟದ ಗೊಂಬೆಗಳು.
ವಿವಿಧ ರೀತಿಯ ವಸ್ತ್ರಾಲಂಕೃತ ರಾಜ-ರಾಣಿ ಜೋಡಿಗಳು ಅಲ್ಲದೆ 356 ವರ್ಷಕ್ಕೂ ಹಳೆಯದಾದ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಜೋಡಿಗಳನ್ನೂ ಪ್ರದರ್ಶಿಸಲಾಗಿದೆ.

ಪಟ್ಟದ ಗೊಂಬೆಗಳ ಮೂಲ:
ಈ ಪಟ್ಟದ ಗೊಂಬೆಗಳ ಮೂಲ ಕೋಲಾರ ಜಿಲ್ಲೆಯ ಅಷ್ಟ ಗ್ರಾಮಗಳಲ್ಲಿ ಒಂದಾದ ಮುಳಬಾಗಿಲು ತಾಲ್ಲೂಕಿನ ಕೊತ್ತಮಂಗಲ ಗ್ರಾಮದ ರಿಗ್ರೆಟ್ ಅಯ್ಯರ್ ಪಾರಂಪರಿಕ ವಂಶದ್ದು.ಈ ಪಟ್ಟದ ಬೊಂಬೆಗಳ ವಂಶಪಾರಂಪರ‍್ಯವಾಗಿ 10 ತಲೆಮಾರಿನಿಂದ ಸಾಗುತ್ತ ಬಂದಿದ್ದು, ಇದೀಗ ವಿಜಯಲಕ್ಷ್ಮೀರಿಗ್ರೆಟ್ ಅಯ್ಯರ್ ಅವರು ಕಾಪಾಡಿಕೊಂಡು ಬಂದಿದ್ದಾರೆ.ಪಟ್ಟಣದ ಗೊಂಬೆಗಳನ್ನು ಕಾಪಾಡುವುದು ನನ್ನ ಕರ್ತವ್ಯ. ಪ್ರತಿ ವರ್ಷ ಇವುಗಳನ್ನು ನವರಾತ್ರಿ ಅಂಗವಾಗಿ ಜೋಡಿಸಿ ಪೂಜಿಸಿದಾಗ ಹಿಂದಿನವರ ಬದುಕು, ಪರಂಪರೆ, ಸಂಸ್ಕೃತಿಗಳ ನೆನಪು ಮರುಕಳಿಸುತ್ತದೆ. ಈ ಕಾರ್ಯಕ್ಕೆ ನನ್ನ ಕುಟುಂಬದ ಬೆಂಬಲವಿದೆ. ಒಟ್ಟಾರೆ ಇದು ನನ್ನ ಸೌಭಾಗ್ಯ ಎನ್ನುತ್ತಾರೆ ವಿಜಯಲಕ್ಷ್ಮಿ ರಿಗ್ರೆಟ್ ಅಯ್ಯರ್.ಒಟ್ಟಾರೆ ಚಾಚೂ ತಪ್ಪದೆ 30 ವರ್ಷಗಳಿಂದ ಇವರು ಪೂಜಿಸಿ ಜೋಡಿಸುತ್ತ ಬಂದಿರುವ ಈ ಪಟ್ಟದ ಗೊಂಬೆಗಳು ತಮ್ಮ ಮುಂದಿನ ಪೀಳಿಗೆಯೂ ನೆನೆಸುವಂತೆ ಜನತದಿಂದ ಉಳಿಸಿಕೊಂಡು ಬಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin