‘ಬಿಗ್ ಬಾಸ್’ ರಿಯಾಲಿಟಿ ಷೋ ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಿರ್ಬಂಧ..?

ಈ ಸುದ್ದಿಯನ್ನು ಶೇರ್ ಮಾಡಿ

Bigg-Boss

ಬೆಂಗಳೂರು, ಅ. 5- ಕನ್ನಡದ ಜನಪ್ರಿಯ ಕಲಾವಿದರನೇಕರು ಈಗ ಟೀವಿ ಚಾನಲ್‍ಗಳಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರ ಪರಿಣಾಮವಾಗಿ ಕನ್ನಡ ಸಿನಿಮಾಗಳ ಗಳಿಕೆ ಕುಸಿದಿದೆ ಎಂದು ಕೆಲ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತ ಬಂದಿದ್ದಾರೆ.  ಟೀವಿ ಚಾನಲ್‍ಗಳಲ್ಲಿ ಪ್ರಸಾರವಾಗುವ ಅನೇಕ ರಿಯಾಲಿಟಿ ಷೋಗಳಲ್ಲಿ ಜನಪ್ರಿಯ ಸಿನಿಮಾ ಕಲಾವಿದರು ಭಾಗವಹಿಸುವುದರಿಂದ ಜನರು ಕಿರೆತೆರೆ ಕಡೆ ಆಕರ್ಷಿತರಾಗುತ್ತಿದ್ದು , ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬುದು ನಿರ್ಮಾಪಕರ ಅಳಲು. ಆದ ಕಾರಣ ಜನಪ್ರಿಯ ಸಿನಿತಾರೆಯರ್ಯಾರೂ ಟೀವಿ ಪ್ರೋಗ್ರಾಂಗಳಲ್ಲಿ ಭಾಗವಹಿಸಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕಠಿಣ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಒಂದು ವೇಳೆ ಇದು ಕಟ್ಟುನಿಟ್ಟಾಗಿ ಜಾರಿಗೆ ಬಂದ ಪಕ್ಷದಲ್ಲಿ ಸುದೀಪ್ ಅವರು ಬಿಗ್‍ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವಂತಿಲ್ಲ. ಸಿನಿಮಾ ಕಲಾವಿದರು ಬಿಗ್‍ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಹಾಗೂ ಅತಿಥಿಗಳಾಗಿ ಪಾಲ್ಗೊಳ್ಳುವಂತಿಲ್ಲ. ಜತೆಗೆ ಒಂದೇ ದಿನ ಐದಾರು ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿರುವುದು ಕನ್ನಡ ಉದ್ಯಮಕ್ಕೆ ಮಾರಕವಾಗಿದೆ ಎಂಬ ದೃಷ್ಟಿಯಿಂದ, ಚಿತ್ರ ಬಿಡುಗಡೆ ಮೇಲೆ ಶಿಸ್ತುಬದ್ಧ ನಿಯಂತ್ರಣ ಹೇರುವ ಸ್ಕ್ರೀನಿಂಗ್ ಕಮಿಟಿಯನ್ನು ಜಾರಿಗೆ ತರಲು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯು ನಿರ್ಧರಿಸಿದೆ.
ಹಲವು ವರ್ಷಗಳ ಹಿಂದೆ ಇಂಥಹ ವ್ಯವಸ್ಥೆ ಇತ್ತು. ಆದರೆ ಅದು ನಿರುಪಯುಕ್ತವಾಯಿತು. ಈಗ ರೂಪುಗೊಳ್ಳುವ ಸಮಿತಿಯು ಗರಿಷ್ಟ ಎರಡು ಅಥವಾ ಮೂರು ಕನ್ನಡ ಚಿತ್ರಗಳ ಬಿಡುಗಡೆಗೆ ಮಾತ್ರ ಅವಕಾಶ ಕಲ್ಪಿಸಿದೆ.

ಇನ್ನು ಚಿತ್ರಮಂದಿರ ಬಾಡಿಗೆ ವಿಚಾರ. ರಾಜ್ಯದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ದುಬಾರಿ ಬಾಡಿಗೆ ವಿಧಿಸುತ್ತಿವೆ ಎಂದು ನಿರ್ಮಾಪಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಲೇ ಇದ್ದಾರೆ. ಕನ್ನಡ ಚಿತ್ರಗಳ ಗಳಿಕೆಯ ಸಾಮಥ್ರ್ಯಕ್ಕೆ ಅನುಗುಣವಾಗಿ ಚಿತ್ರಮಂದಿರಗಳ ಬಾಡಿಗೆ ದರ ನಿಗದಿ ಮಾಡಲು ಸಾಧ್ಯವಾಗಿಲ್ಲ. ಈಗ ಆಯಾ ಚಿತ್ರಗಳ ಗಳಿಕೆಯನ್ನು ಚಿತ್ರಮಂದಿರದವರು ಹಾಗೂ ನಿರ್ಮಾಪಕರು ನಿಗದಿತ ಪ್ರಮಾಣದಲ್ಲಿ ಹಂಚಿಕೆ ಮಾಡಿಕೊಳ್ಳುವ ಕ್ರಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದು ಜಾರಿಗೆ ಬಂದ ಪಕ್ಷದಲ್ಲಿ ನಿರ್ಮಾಪಕರಿಗೆ ಪ್ರಯೋಜನವಾಗಲಿದೆ.

ಚಲನಚಿತ್ರ ವಾಣಿಜ್ಯಮಂಡಳಿಯನ್ನು ಉದ್ಯಮದ ಅಂಗಸಂಸ್ಥೆಗಳೇ ಉಪೇಕ್ಷಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹುದ್ದೆಗೆ ಈ ವರ್ಷ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಈಗಿನ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಚಾಲನೆ ನೀಡಿರುವ ಕೆಲ ಕಾರ್ಯ ಯೋಜನೆಗಳು ಅನುಷ್ಠಾನಗೊಳ್ಳಲು ಸಮಯಾವಕಾಶ ಬೇಕಾಗಿರುವುದರಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಕಾರ್ಯಾವಧಿಯನ್ನು 2017ರ ಜೂನ್ 17ರವರೆಗೆ ವಿಸ್ತರಿಸಲಾಗಿದೆ. ಇದು ಐತಿಹಾಸಿಕ ನಿರ್ಧಾರ.

► Follow us on –  Facebook / Twitter  / Google+

Facebook Comments

Sri Raghav

Admin