ಮಾಡಬಾರದ್ದನ್ನು ಮಾಡಿ, ಜೈಲಿಗೂ ಹೋಗಿಬಂದ ಯಡಿಯೂರಪ್ಪಗೆ ನೈತಿಕತೆ ಇದೆಯೇ..? : ಸಿದ್ದು ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

siddu

ತುಮಕೂರು, ಅ.5- ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ನಾಯಕರು ಮಾಡಬಾರದ ಭ್ರಷ್ಟಾಚಾರಗಳನ್ನು ಮಾಡಿದರು. ಸ್ವತಃ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗಿ ಬಂದರು. ಈಗ ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಅವರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ತಕ್ಕಡಿಗೆ ಹಾಕಿದ ಕಪ್ಪೆಗಳಂತಾಡಿದರು. ಆ ಪಕ್ಷ ಎಂದೂ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಹಲವು ನಾಯಕರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. 2008ರಲ್ಲಿ ಬಿಜೆಪಿಗೆ ಅಕಸ್ಮಾತ್ ಆಗಿ ಅಧಿಕಾರ ಸಿಕ್ಕಿತ್ತು. ಆದರೆ, ಸಿಕ್ಕಿದ್ದನ್ನು ಉಳಿಸಿಕೊಳ್ಳುವುದಕ್ಕೂ ಅವರಿಂದಾಗಲಿಲ್ಲ ಎಂದ ಅವರು, ಗುಲ್ಬರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಅಧಿಕಾರಕ್ಕೆ ಬರುವ ತನಕ ವಿರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ, ಹಲವು ಭ್ರಷ್ಟಾಚಾರಗಳಲ್ಲಿ ತೊಡಗಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಗೆ ಮತ್ತೆ ತಾವು ಅಧಿಕಾರಕ್ಕೆ ಬರುವುದಾಗಿ ಹೇಳಿಕೊಳ್ಳಲು ನೈತಿಕತೆಯೇ ಇಲ್ಲ ಎಂದರು.

ಕಾವೇರಿ ನೀರಿನ ಕುರಿತು ಮಾತನಾಡಿದ ಸಿಎಂ ನಮಗೆ ಬೇಕಾಗಿರುವ ನೀರನ್ನು ಇಟ್ಟುಕೊಂಡೇ ಅಲ್ಪಸ್ವಲ್ಪ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತದೆ. ಇದರಲ್ಲಿ ಅನಗತ್ಯ ಗೊಂದಲ ಬೇಡ. ಕಾವೇರಿ ಕೊಳ್ಳದ ರೈತರು ಹಾಗೂ ಅಲ್ಲಿನ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.  ಹೇಮಾವತಿ ಜಲಾಶಯದ ನೀರನ್ನು ತುಮಕೂರು ಕಡೆಗೆ ಹರಿಸಲು ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು. ಕಾವೇರಿ ವಿಚಾರವಾಗಿ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಲು ನಾರಿಮನ್ ಅನಿವಾರ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.

ತುಮಕೂರನ್ನು ಪೊಲೀಸ್ ಕಮಿಷನರೇಟ್ ಮಾಡುವ ಯೋಜನೆ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗೆ ಇದು ಪ್ರಗತಿಯಲ್ಲಿದೆ. ಆದರೆ ಇನ್ನೂ ಅಂತಿಮಗೊಂಡಿಲ್ಲ. ಸದ್ಯದಲ್ಲೇ ಇದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ತನ್ವೀರ್‍ಸೇಠ್, ಎಚ್.ಸಿ.ಮಹದೇವಪ್ಪ, ಶಾಸಕ ರಫೀಕ್ ಅಹಮ್ಮದ್, ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin