ಬೆಳ್ಳಂದೂರು ಕಟ್ಟಡ ಕುಸಿತ ಪ್ರಕರಣ : 6ಕ್ಕೇರಿದ ಸಾವಿನ ಸಂಖ್ಯೆ, ಮುಂದುವರೆದ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Building-Collapse

ಬೆಂಗಳೂರು, ಅ.7- ನಗರದ ಹೊರವಲಯದ ಬೆಳ್ಳಂದೂರು ಬಳಿ ಐದು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮತ್ತೊಬ್ಬನ ಶವ ಇಂದು ಮಧ್ಯಾಹ್ನ ಪತ್ತೆಯಾಗಿದ್ದು, ಈತ ಗ್ರಾನೇಟ್ ಕೆಲಸ ಮಾಡುತ್ತಿದ್ದ ಕೃಷ್ಣ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 9.30ರಲ್ಲಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ಮೃತರನ್ನು ಪೇಂಟರ್ ವೃತ್ತಿ ಮಾಡುತ್ತಿದ್ದ ದೃವ ಮತ್ತು ಶಂಶುಲ್ಲಾ ಎಂದು ಗುರುತಿಸಲಾಗಿದೆ. ಮೊನ್ನೆ ಅಶೋಕ್‍ಮಹಾಂತ್, ರಾಮ್‍ಬಾಬು, ರಹಾದ್ ಮೃತಪಟ್ಟಿದ್ದು, ಒಟ್ಟಾರೆ ಮೃತರ ಸಂಖ್ಯೆ 6ಕ್ಕೇರಿದೆ.

ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು, ಬಿಬಿಎಂಪಿ ನೌಕರರು, ತುರ್ತು ಸೇವೆಗಳ ತಂಡ, ಎನ್‍ಡಿಆರ್‍ಎಫ್‍ನ ಸಿಬ್ಬಂದಿಗಳು ರಕ್ಷಣಾ ಕಾರ್ಯ ಮುಂದುವರೆಸಿದ್ದು, ಇಂದು ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಗಾಯಗೊಂಡಿರುವ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ಕಟ್ಟಡದ ಪಾಲುದಾರ ಶ್ರೀನಿವಾಸಲುರೆಡ್ಡಿ ಎಂಬುವರನ್ನು ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಬಂಧಿಸಿ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲೇ ಅಗ್ನಿಶಾಮಕ ದಳದ ಅಧಿಕಾರಿಗಳು, ಡಿಸಿಪಿ ಬೋರಲಿಂಗಯ್ಯ, ಎಸಿಪಿ ಲಕ್ಷ್ಮೀನಾರಾಯಣ ಅವರು ಮೊಕ್ಕಾಂ ಹೂಡಿದ್ದಾರೆ. ಮೊನ್ನೆ (ಅ.5) ಮಧ್ಯಾಹ್ನ 1.30ರ ಸುಮಾರಿನಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿತ ಸಂಭವಿಸಿದ ಕ್ಷಣದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದ್ದು, ನಿನ್ನೆ ತಡರಾತ್ರಿವರೆಗೂ ಶೋಧಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ಮತ್ತೆ ಶೋಧ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿದ್ದರು. ಅವಶೇಷಗಳಡಿ ಇರಬಹುದೆನ್ನಲಾದ ಕಾರ್ಮಿಕರ ಪತ್ತೆಗೆ ವಿಕ್ಟಿಮ್ ಲೊಕೇಟಿವ್ ಕ್ಯಾಮೆರಾ ಬಳಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಚರಣೆಯಲ್ಲಿ ತೊಡಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin