ಬೆಳ್ಳಂದೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 6 ಮಂದಿ ಸಾವಿಗೆ ಕಾರಣವಾಗಿದ್ದು ಒಂದು ಪಾಳುಬಾವಿ..!

ಈ ಸುದ್ದಿಯನ್ನು ಶೇರ್ ಮಾಡಿ

build

ಬೆಂಗಳೂರು, ಅ.8- ಪಾಳುಬಾವಿಯನ್ನು ವೈಜ್ಞಾನಿಕವಾಗಿ ಮುಚ್ಚಿಸದಿರುವುದು, ಕಾಮಗಾರಿಯಲ್ಲಿ ಫಿಲ್ಟರ್ ಮರಳು ಬಳಕೆ ಹಾಗೂ ಸಮರ್ಪಕ ಕ್ಯೂರಿಂಗ್ ಮಾಡದಿರುವುದೇ 6ಮಂದಿಯನ್ನು ಬಲಿ ತೆಗೆದುಕೊಂಡ ಬೆಳ್ಳಂದೂರು ಕಟ್ಟಡ ಕುಸಿತಕ್ಕೆ ಕಾರಣ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಟ್ಟಡ ಕುಸಿತಕ್ಕೆ ಕಾರಣ ಏನೆಂಬ ನಿಖರ ಮಾಹಿತಿ ಈ ಸಂಜೆ ಲಭ್ಯವಾಗಿದ್ದು, ಮಾಲೀಕ ಶ್ರೀನಿವಾಸರೆಡ್ಡಿ ಜಿಪುಣತನವೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಎಂಬುದು ತಿಳಿದು ಬಂದಿದೆ. ಕುಸಿದುಬಿದ್ದ ಕಟ್ಟಡದ ಸ್ಥಳದಲ್ಲಿ ನಿರ್ಮಾಣ ಕಾಮಗಾರಿಗೂ ಮುನ್ನ ಪಾಳು ಬಾವಿಯಿತ್ತು. ಬಾವಿ ಮುಚ್ಚಿ ಕಟ್ಟಡ ನಿರ್ಮಿಸಬೇಕಾದರೆ ಬಾವಿಯನ್ನು ವೈಜ್ಞಾನಿಕವಾಗಿ ಮುಚ್ಚಿಸಿ ನಂತರ ಕಾಮಗಾರಿ ನಡೆಸಲು ತಜ್ಞರು ಸಲಹೆ ನೀಡಿದ ನಂತರವಷ್ಟೇ ನಿರ್ಮಾಣ ಕಾರ್ಯ ಆರಂಭಿಸಬೇಕು.

ಈ ಜಾಗದಲ್ಲಿದ್ದ ಬಾವಿಯನ್ನು ವೈಜ್ಞಾನಿಕವಾಗಿ ಮುಚ್ಚಿಸಬೇಕಾದರೆ ಕನಿಷ್ಠ 8 ತಿಂಗಳಾದರು ಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದರು. ಆದರೆ, ದುರಾಸೆ ವ್ಯಕ್ತಿಯಾದ ಶ್ರೀನಿವಾಸರೆಡ್ಡಿ ತಜ್ಞರ ಸಲಹೆಯನ್ನು ಬದಿಗೊತ್ತಿ ಕಾಟಾಚರಕ್ಕೆ ಬಾವಿಮುಚ್ಚಿಸಿ ತರಾತುರಿಯಲ್ಲಿ ನಿರ್ಮಾಣ ಕಾರ್ಯ ಆರಂಭಿಸಿದ್ದೇ ದುರಂತಕ್ಕೆ ಮೂಲ ಕಾರಣ. ಬಾವಿಯನ್ನು ಸಮರ್ಪಕವಾಗಿ ಮುಚ್ಚಿಸದೆ ಪಿಲ್ಲರ್ ನಿರ್ಮಿಸಲಾಗಿತ್ತು. ಪಿಲ್ಲರ್ ನಿರ್ಮಾಣ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿಗಳಿಗೂ ಫಿಲ್ಟರ್ ಮರಳು ಬಳಕೆ ಮಾಡಿರುವುದು ಮತ್ತೊಂದು ಕಾರಣವಾಗಿದೆ. ಇನ್ನು ನಿರ್ಮಾಣ ಮಾಡಲಾದ ಕಟ್ಟಡವನ್ನು ಸರಿಯಾಗಿ ಕ್ಯೂರಿಂಗ್ ಕೂಡ ಮಾಡಿರಲಿಲ್ಲ.  ಒಟ್ಟಾರೆ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾದ ಎಲ್ಲಾ ಕಚ್ಛಾವಸ್ತುಗಳು ಕಳಪೆಯಾಗಿದ್ದವು ಎಂದು ಬಿಬಿಎಂಪಿ ಮೂಲಗಳು ಈ ಸಂಜೆಗೆ ಖಚಿತ ಪಡಿಸಿವೆ.

ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಐದು ಮಂದಿ ಪಾಲುದಾರರಿಂದ ಹಣ ಪೀಕಿದ ಶ್ರೀನಿವಾಸರೆಡ್ಡಿ ಕಟ್ಟಡ ನಿರ್ಮಾಣದ ಹಣ ಮುಂಡಾಯಿಸಲು ಕಳಪೆ ಕಚ್ಛಾವಸ್ತುಗಳನ್ನು ಬಳಕೆ ಮಾಡಿ ಬಿಲ್ಡಿಂಗ್ ನಿರ್ಮಿಸಿ ದುಡ್ಡು ಮಾಡುವ ದುರಾಸೆಯೇ 6 ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡಿದೆ. ಕೇವಲ ಮೂರಂತಸ್ತಿನ ಕಟ್ಟಡ ನಿರ್ಮಿಸುವ ಜಾಗದಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದ್ದ ಶ್ರೀನಿವಾಸರೆಡ್ಡಿ ಇದಕ್ಕೆ ಬಿಬಿಎಂಪಿ ಅನುಮತಿಯನ್ನೂ ಪಡೆದಿರಲಿಲ್ಲ. ಕೇವಲ ಸ್ಥಳೀಯ ಇಂಜಿನಿಯರ್‍ಗಳ ಕೈ ಬೆಚ್ಚಗೆ ಮಾಡಿ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದ.
ಐದಂತಸ್ತಿನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಹಿರಿಯ ಅಧಿಕಾರಿಗಳು ಕಾಮಗಾರಿ ಕಳಪೆಯಿಂದ ಕೂಡಿದೆ. ಕಟ್ಟಡ ಗುಣಮಟ್ಟದಿಂದ ಕೂಡಿಲ್ಲ. ಕೂಡಲೇ ಕಾಮಗಾರಿ ನಿಲ್ಲಿಸಿ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಆದರೂ ಮೊಂಡಾಟಕ್ಕಿಳಿದ ಶ್ರೀನಿವಾಸರೆಡ್ಡಿ ಬಿಬಿಎಂಪಿ ಎಇ ಕೋದಂಡರೆಡ್ಡಿ ಮತ್ತು ಎಇಇ ರಾಘವೇಂದ್ರ ಅವರ ಕೈ ಬೆಚ್ಚಗೆ ಮಾಡಿ ಕೆಲಸ ಮುಂದುವರೆಸಿದ್ದ.  ನಿರೀಕ್ಷೆಯಂತೆ ಕಟ್ಟಡ ಕುಸಿದು ಬಿದ್ದು 6 ಮಂದಿ ಅಮಾಯಕ ಜೀವಗಳು ಬಲಿಯಾಗಿವೆ. ಬಡವರ ಜೀವನದೊಂದಿಗೆ ಚಲ್ಲಾಟವಾಡಿದ ಶ್ರೀನಿವಾಸರೆಡ್ಡಿ ಜೈಲು ಸೇರಿದ್ದಾನೆ. ಆತನ ಐವರು ಪಾಲುದಾರರು ಕಾಣೆಯಾಗಿದ್ದಾರೆ. ರೆಡ್ಡಿಯ ಕರ್ಮಕಾಂಡಕ್ಕೆ ಬೆಂಬಲ ನೀಡಿದ ಬಿಬಿಎಂಪಿ ಎಂಜಿನಿಯರ್‍ಗಳಾದ ಕೋದಂಡರೆಡ್ಡಿ ಮತ್ತು ರಾಘವೇಂದ್ರರನ್ನು ಸೆರೆಹಿಡಿಯಲು ಪೊಲೀಸರು ನಡೆಸುತ್ತಿರುವ ಸಾಹಸಕ್ಕೆ ಇದುವರೆಗೂ ಫಲ ದೊರೆತಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin