ರಾಜ್ಯದಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Rain001

ಬೆಂಗಳೂರು, ಅ.9– ಒಂದೆಡೆ ಸತತ ಬರಗಾಲ, ಮತ್ತೊಂದೆಡೆ ಜಲಕ್ಷಾಮದಿಂದ ತತ್ತರಿಸಿರುವ ರಾಜ್ಯದಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇನ್ನೂ ಒಂದು ವಾರ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆ ಕಂಡುಬರುತ್ತಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆಗಸ್ಟ್ ಹಾಗೂ ಸೆಪ್ಟೆಂಬರ್‍ನಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ಕಾವೇರಿ ಜಲಾನಯನ ಭಾಗದ ಜಲಾಶಯಗಳು ಭರ್ತಿಯಾಗದೆ ಸಂಕಷ್ಟ ಅನುಭವಿಸುವಂತಾಗಿದೆ. ಇದರ ಬೆನ್ನಲ್ಲೆ ರಾಜ್ಯದ 110 ತಾಲೂಕುಗಳು ಈಗಾಗಲೇ ಬರದ ದವಡೆಗೆ ಸಿಲುಕಿ ನಲುಗುತ್ತಿವೆ. ಇದೂ ಸಾಲದೆಂಬಂತೆ ಅಕ್ಟೋಬರ್‍ನ ಮೊದಲ ಎರಡು ವಾರಗಳಲ್ಲೂ ಕೂಡ ಮಳೆಯಾಗುತ್ತಿಲ್ಲ. ಎಲ್ಲೆಡೆ ಬರದ ಛಾಯೆ ಆವರಿಸಿಕೊಂಡಿದೆ. ಇದರಿಂದ ಜನ-ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ.

ಹವಾ ಮುನ್ಸೂಚನೆ ಪ್ರಕಾರ, ಅಕ್ಟೋಬರ್ ಮೂರನೆ ವಾರದವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದ್ದು, ಅದೇ ರೀತಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೈದರಾಬಾದ್ ಕರ್ನಾಟಕ ಭಾಗದ ಬೀದರ್, ಕಲಬುರಗಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ.  ಆದರೆ, ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಮಳೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಬರ ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ ಎಂದರು.

ಕಾವೇರಿ ಜಲಾನಯನ ಭಾಗದಲ್ಲಿ ವಸ್ತುಸ್ಥಿತಿ ಅಧ್ಯಯನ ಮಾಡಲು ಆಗಮಿಸಿದ್ದ ಕೇಂದ್ರದ ತಂಡಕ್ಕೆ ವೈಜ್ಞಾನಿಕ ಮಾಹಿತಿಯನ್ನಾಧರಿಸಿ ವಾಸ್ತವಾಂಶ ನೀಡಲಾಗಿದೆ. ಅಂಕಿ-ಅಂಶಗಳ ಸಹಿತ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ತಂಡಕ್ಕೂ ಕೂಡ ಮಾಹಿತಿ ಬಗ್ಗೆ ವಿಶ್ವಾಸ ಮೂಡಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin