ಮತ್ತೆ ಸಂಸತ್ ಮೇಲೆ ದಾಳಿಗೆ ಜೆಇಎಂ ಉಗ್ರರ ಸ್ಕೆಚ್ : ಗುಪ್ತಚರ ಸಂಸ್ಥೆಗಳಿಂದ ಸ್ಫೋಟಕ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

Terrorist-01

ನವದೆಹಲಿ, ಅ.10– ದೇಶದ ಶಕ್ತಿಕೇಂದ್ರ ಸಂಸತ್ ಭವನದ ಮೇಲೆ ಜೈಷ್-ಇ-ಮಹಮದ್ (ಜೆಇಎಂ) ಭಯೋತ್ಪಾದಕರು ಮತ್ತೆ ಭಯಾನಕ ದಾಳಿ ನಡೆಸಲಿದ್ದಾರೆ ಎಂಬ ಸ್ಫೋಟಕ ಮಾಹಿತಿಯ ಬಗ್ಗೆ ಗುಪ್ತಚರ ಸಂಸ್ಥೆಗಳು ಮಹತ್ವದ ಸುಳಿವು ನೀಡಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯ (ಐಎಸ್‍ಐ) ಸೂಚನೆಯಂತೆ ಪಾರ್ಲಿಮೆಂಟ್ ಮೇಲೆ ಜೈಷ್ ಉಗ್ರರು ಭೀಕರ ಆಕ್ರಮಣಕ್ಕೆ ಸಜ್ಜಾಗಿದ್ದಾರೆ ಎಂದು ಗೂಢಚರ್ಯೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಸಂಸತ್ ಭವನದ ಮೇಲೆ ಭೀಕರ ದಾಳಿ ನಡೆಸುವಂತೆ ಐಎಸ್‍ಐ ಈಗಾಗಲೇ ಜೈಷ್ ಉಗ್ರರಿಗೆ ಸ್ಪಷ್ಟ ಸೂಚನೆ ನೀಡಿದ್ದು, 2001ರ ದಾಳಿ ಮರುಕಳಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ಸುಳಿವು ಕೊಟ್ಟಿವೆ.

ಪಾರ್ಲಿಮೆಂಟ್ ಮೇಲೆ ಮತ್ತೆ ಭಯಾನಕ ದಾಳಿ ನಡೆಸಲು ಜೆಇಎಂ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಸಂಚು ರೂಪಿಸಿದ್ದು, ತನ್ನ ಆಪ್ತ ಸಹಚರರಿಗೆ ಕಟ್ಟಪ್ಪಣೆ ಮಾಡಿದ್ದಾನೆ ಎಂಬ ಬಗ್ಗೆ ಭಾರತದ ಒಂದು ಪ್ರಮುಖ ಗುಪ್ತಚರ ಸಂಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಸಿಐಡಿ ವಿಭಾಗಕ್ಕೆ ಮಾಹಿತಿ ಲಭಿಸಿದೆ.  ಸಂಸತ್ ಮೇಲೆ ಮತ್ತೆ ಆಕ್ರಮಣ ನಡೆಸಲು ಸಾಧ್ಯವಾಗುವ ಎಲ್ಲ ರೀತಿಯ ಯತ್ನಗಳನ್ನು ನಡೆಸುವಂತೆ ಮೌಲಾನ ನೀಡಿರುವ ಸೂಚನೆ ಮೇರೆಗೆ ಜೈಷ್ ಉಗ್ರರು ಈ ನಿಟ್ಟಿನಲ್ಲಿ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದಾರೆ. ಪಾರ್ಲಿಮೆಂಟ್‍ಗೆ ಭಾರೀ ಬಿಗಿ ಭದ್ರತೆ ಒದಗಿಸಿದ್ದು, ಇದನ್ನು ಭೇದಿಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಲಾಗಿದೆ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಸತ್‍ಭವನದ ಮೇಲಿನ ಉದ್ದೇಶಿತ ದಾಳಿ ವಿಫಲಗೊಂಡರೆ, ದೆಹಲಿ ಸಚಿವಾಲಯ, ಅಕ್ಷರಧಾಮ ಮತ್ತು ಲೋಟಸ್ ಟೆಂಪಲ್‍ನಂಥ ಪ್ರಮುಖ ಸ್ಥಳಗಳು, ಜನಸಂದಣಿ ಇರುವ ಮಾರುಕಟ್ಟೆಗಳು ಅಥವಾ ಬಸ್-ರೈಲು ನಿಲ್ದಾಣಗಳಲ್ಲಿ ಕುಕೃತ್ಯ ನಡೆಸಲು ಸಹ ಷಡ್ಯಂತ ರೂಪಿಸಲಾಗಿದೆ.  ಅಫ್ಜಲ್ ಗುರು ನೇತೃತ್ವದಲ್ಲಿ ಹದಿನೈದು ವರ್ಷಗಳ ಹಿಂದೆ ಅಂದರೆ 13ನೇ ಡಿಸೆಂಬರ್, 2001ರಲ್ಲಿ ಐವರು ಜೈಷ್ ಉಗ್ರರು ಪಾರ್ಲಿಮೆಂಟ್ ಮೇಲೆ ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಪೊಲೀಸರು, ಭದ್ರತಾಪಡೆಯ ಇಬ್ಬರು ಯೋಧರು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಐವರು ಭಯೋತ್ಪಾದಕರು ಹತರಾದರು.

ವಿಮಾನ ಹೈಜಾಕ್ ಸಂಚು..?:

ಇದೇ ವೇಳೆ, ಈ ಹಿಂದೆ ಇಂಡಿಯನ್ ಏರ್‍ಲೈನ್ಸ್ ವಿಮಾನ ಐಸಿ-814ನನ್ನು ಆಫ್ಘಾನಿಸ್ತಾನದ ಕಂದಹಾರ್‍ಗೆ ಅಪಹರಿಸಿದ್ದ ಮೌಲಾನ ಅಬ್ದುರ್ ರೆಹಮಾನ್ ನೇತೃತ್ವದ ಜೈಷುಲ್-ಹಕ್ ತನ್‍ಜೀಮ್ ಉಗ್ರಗಾಮಿ ಸಂಘಟನೆ ಸಹ ಭಾರತದ ಮೇಲೆ ವಕ್ರದೃಷ್ಟಿ ಬೀರಿರುವುದು ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ.  ವಿಮಾನ ಅಪಹರಣ ಸಂಚನ್ನೂ ಕೂಡ ಉಗ್ರರು ರೂಪಿಸಿದ್ದಾರೆ ಎಂದು ತಿಳಿದುಬಂದಿದ್ದು, ದೇಶದ ವಿವಿಧ ಪ್ರಮುಖ ವಿಮಾನನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.  ಭಾರತೀಯ ಯೋಧರು ಲಷ್ಕರ್-ಇ-ತೊಯ್ಬಾ ಉಗ್ರಗಾಮಿಗಳ ಜಂಘಾಬಲವನ್ನು ಉಡುಗಿಸಿರುವುದರಿಂದ ಇವೆರೆಡು ಸಂಘಟನೆಗಳು ಸೇಡು ತೀರಿಸಿಕೊಳ್ಳಲು ಸಕ್ರಿಯವಾಗಿವೆ ಎಂಬ ಮಾಹಿತಿಯೂ ಲಭಿಸಿದೆ.  ಗುಪ್ತಚರ ಸಂಸ್ಥೆಗಳ ಮಾಹಿತಿ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin