ಬಿಕೋ ಎನ್ನುತ್ತಿರುವ ಸಿಲಿಕಾನ್ ಸಿಟಿ

ಈ ಸುದ್ದಿಯನ್ನು ಶೇರ್ ಮಾಡಿ

6767

ಬೆಂಗಳೂರು,ಅ.10- ನಗರದ ಅತ್ಯಂತ ದಟ್ಟಣೆಯಿಂದ ಕೂಡಿರುವ ರಸ್ತೆಗಳಾದ ಕೆ.ಜಿ. ರಸ್ತೆ, ಎಂ.ಜಿ.ರಸ್ತೆ, ರೆಸಿಡೆನ್ಸಿ ರಸ್ತೆ, ಕೆ.ಎಚ್. ರಸ್ತೆ, ಮಿಷನ್ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಹಲವು ರಸ್ತೆಗಳು ಸಿಗ್ನಲ್ ಫ್ರೀ ಕಾರಿಡಾರ್‍ಗಳಾಗಿವೆ.ಏಕಾಏಕಿ ರಾತ್ರಿ ಕಳೆಯುವುದರಲ್ಲಿ ಇದೆಲ್ಲಾ ಹೇಗೆ ಸಾಧ್ಯವಾಯಿತು ಅಂದುಕೊಳ್ಳಬೇಡಿ. ಸದ್ಯಕ್ಕೆ ಒಂದು ವಾರ ನಿರಂತರ ಸರ್ಕಾರಿ ರಜೆ ಇರುವುದರಿಂದ ನಗರದ ಹಲವು ಮಾರ್ಗಗಳು ಅಘೋಷಿತ ಸಿಗ್ನಲ್ ಫ್ರೀ ರಸ್ತೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು ಮಹಾನಗರ ಇಂದು ಜನ ಹಾಗೂ ವಾಹನ ದಟ್ಟಣೆ ಇಲ್ಲದ ಒಂದು ಸಣ್ಣಪುಟ್ಟ ನಗರಗಳ ಮಾದರಿಯಲ್ಲಿ ಗೋಚರಿಸಲು ಆರಂಭಿಸಿದೆ.
ನಿತ್ಯ ಒಂದೆಡೆಯಿಂದ ಇನ್ನೊಂದೆಡೆ ತೆರಳಲು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಕಳೆಯುತ್ತಿದ್ದ ವಾಹನ ಸವಾರರು ಇಂದು ನಿಮಿಷಗಳಲ್ಲಿ ತಲುಪಬೇಕಾದ ಸ್ಥಳವನ್ನು ಮುಟ್ಟುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ದಸರಾ ಪ್ರಯುಕ್ತ ಸರ್ಕಾರಿ ರಜೆ ನೀಡಿರುವುದು. ಇದರಿಂದ ಬಹುತೇಕರು ಕುಟುಂಬ ಸಮೇತ ಪರ ಊರಿಗೆ ತೆರಳಿದ್ದು. ಇದರಿಂದ ಸಹಜವಾಗಿ ನಗರದಲ್ಲಿ ದಟ್ಟಣೆ ತಗ್ಗಿದೆ. ಕಳೆದ ಶನಿವಾರದಿಂದಲೇ ರಜೆಯ ಸರಣಿ ಆರಂಭವಾಗಿದ್ದು, ಮುಂದಿನ ಗುರುವಾರದವರೆಗೂ ಇದು ಮುಂದುವರಿಯಲಿದೆ. ಬಹುತೇಕ ಮಂದಿಸಿಕ್ಕ ರಜೆಯ ಮಜಾ ಕಳೆಯಲು ನಗರ ಬಿಟ್ಟಿದ್ದಾರೆ. ಇನ್ನು ಕೆಲವರು ದಟ್ಟಣೆ ಕಡಿಮೆ ಇರುವ ಕಾರಣ ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಶೇ.60ರಷ್ಟು ವಾಹನಗಳು ಮಾತ್ರ ರಸ್ತೆಯಲ್ಲಿವೆ.
ಬೆಂಗಳೂರು ಮಹಾನಗರದಲ್ಲಿ ಸದ್ಯ ಇರುವ 65 ಲಕ್ಷ ಸಾರಿಗೆ ವಾಹನಗಳ ಪೈಕಿ ಶೇ.60ರಷ್ಟು ವಾಹನ ಮಾತ್ರ ಓಡಾಡುತ್ತಿದ್ದು, ಅದ್ದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಯಾವುದೇ ಸಿಗ್ನಲ್‍ಗಳಲ್ಲಿ ಹೆಚ್ಚುಹೊತ್ತು ವಾಹನ ನಿಂತು ತೆರಳುವ ಅಗತ್ಯ ಕಾಣುತ್ತಿಲ್ಲ.ಒಟ್ಟಾರೆ ಬಹು ದಿನದಿಂದ ನಗರದಲ್ಲಿ ಹಲವು ಮಾರ್ಗವನ್ನು ಸಿಗ್ನಲ್ ಫ್ರಿ ಮಾಡುವ ಕನಸು ಕಾಣುತ್ತಾ, ಯಶಸ್ಸು ಸಿಗದೇ ಪರದಾಡುತ್ತಿದ್ದ ಸರ್ಕಾರ, ಬಿಬಿಎಂಪಿ ಒಮ್ಮೆ ಯಶಸ್ಸು ಕಂಡರೆ ನಗರದ ಸ್ಥಿತಿ ಹೇಗಿರಬಹುದು ಎಂದು ನಿರೀಕ್ಷಿಸುವವರಿಗೆ ಸದ್ಯದ ಸ್ಥಿತಿ ಉದಾಹರಣೆಯಾಗಿ ಸಿಗುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin