ಅನ್ಯ ಭಾಷಿಗರಿಗೆ ಕನ್ನಡ ಕಲಿಸಿ : ಮನುಬಳಿಗಾರ್

ಈ ಸುದ್ದಿಯನ್ನು ಶೇರ್ ಮಾಡಿ

Manubaligar

ಬೆಂಗಳೂರು, ಅ.14– ಕರ್ನಾಟಕದಲ್ಲಿರುವ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಕಾಯಕವನ್ನು ಎಲ್ಲರೂ ಶ್ರದ್ಧೆಯಿಂದ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನುಬಳಿಗಾರ್ ಸಲಹೆ ನೀಡಿದರು.  ನಗರದ ಪುರಭವನದಲ್ಲಿ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾಲ್‍ಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿಗಳು ಬೇರೆ ಭಾಷೆಯಲ್ಲಿ ಮಾತನಾಡಿದರೆ ಕನ್ನಡದಲ್ಲೇ ವ್ಯವಹರಿಸುವಂತೆ ಒತ್ತಡ ಹೇರಬೇಕು. ನಾನು ವಿದ್ಯಾರ್ಥಿ ಜೀವನದಲ್ಲಿ ಇಂತಹ ಕೆಲಸ ಮಾಡುತ್ತಿದ್ದೆ. ಅನ್ಯ ಭಾಷಿಗರಿಗೆ ಮೂರು ತಿಂಗಳ ಒಳಗಾಗಿ ಕನ್ನಡ ಕಲಿಯಲು ಕಾಲಾವಕಾಶ ನೀಡಬೇಕು. ಅವರು ಕಲಿತಿದ್ದಾರೇಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಂಘಟನೆಗಳ ಹೋರಾಟಗಾರರನ್ನು ಗೌರವಿಸಬೇಕು. ಕರ್ನಾಟಕದಲ್ಲಿ ಕನ್ನಡ ಮಾತ್ರ ಎಂಬ ಕಡ್ಡಾಯವಿಲ್ಲದೇ ಇದ್ದರೂ, ಕನ್ನಡಕ್ಕೆ ಆದ್ಯತೆ ಎಂಬ ಧ್ಯೇಯ ವಾಕ್ಯವನ್ನು ಪಾಲಿಸಬೇಕು. ಮೊದಲ ಸಾವಿರ ವರ್ಷಗಳಲ್ಲಿ ಕನ್ನಡವೇ ಜಗತ್ತಿನ ಎಲ್ಲಾ ಭಾಷೆಗಳಿಗೂ ಆಸರೆಯ ಭಾಷೆಯಾಗಿತ್ತು. ಸಂಸ್ಕøತ ಸೇರಿದಂತೆ ಬಹಳಷ್ಟು ಭಾಷೆಗಳು ಕನ್ನಡ ಪದಗಳನ್ನು ಯರವಲು ಪಡೆದಿದ್ದವು. ಒಂದು ಸಾವಿರ ವರ್ಷದ ನಂತರ ತಮಿಳು, ತೆಲಗು, ಹಿಂದಿ, ಮಲೆಯಾಳಿ ಭಾಷೆಗಳು ಹೆಚ್ಚು ಪ್ರಚಾರ ಪಡೆದು ಕನ್ನಡವನ್ನು ಹಿಂದೆ ಹಾಕಿದೆ ಎಂದು ಸಂಶೋಧಕ ಎಸ್.ಎಸ್.ಶೆಟ್ಟರ್ ಅವರು ಬರೆದಿರುವ ಪುಸ್ತಕವನ್ನು ಯಾರು ಅಲ್ಲಗಳೆಯಲು ಸಾಧ್ಯವಾಗಿಲ್ಲ ಎಂದರು.

ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಮಾತನಾಡಿ, ಸಾಹಿತ್ಯ ಸಮ್ಮೇಳನ ಆಯೋಜನೆ ಪುತ್ಥಳಿಗಳ ಪ್ರತಿಷ್ಠಾಪನೆಯ ಜತೆಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಾಮಾಣಿಕ  ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರು ಸಮ್ಮೇಳನವನ್ನು ಉದ್ಘಾಟಿಸಿದರು. ಹಿರಿಯ ಸಾಹಿತಿ ಲೀಲಾದೇವಿ ಆರ್.ಪ್ರಸಾದ್ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾಹಿತಿಗಳಾದ ಜಿ.ರಾಮಕೃಷ್ಣ, ಸಂಧ್ಯಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   ನುಡಿಜಾಗರ, ಕನ್ನಡಕ್ಕೆ ಮಹಿಳೆಯರ ಕೊಡುಗೆ ಸೇರಿದಂತೆ ಹಲವು ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಸಂಧ್ಯಾರೆಡ್ಡಿ ಪ್ರಸ್ತಾವಿಕ ನುಡಿಗಳನ್ನಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin