ಖತರ್ನಾಕ್ ಹಾಸನ ಹಂತಕಿಯರ ಹೆಡೆಮುರಿ ಕಟ್ಟಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Sri-Sample-women-arrested

ಹಾಸನ,ಅ.15- ಇವರನ್ನು ನಂಬಿದರೆ ಸಾವು ಗ್ಯಾರಂಟಿ. ಮೈಮೇಲೆ ಒಡವೆ ಧರಿಸಿದ ಅದೆಷ್ಟೋ ಅಮಾಯಕ ಜೀವಗಳು ಈ ತಂಡದ ಹಂತಕಿಯರಿಗೆ ಬಲಿಯಾಗಿದ್ದಾರೆ. ಇಂತಹ ಖತರ್ನಾಕ್ ಹಾಸನ ಹಂತಕಿಯರಿಗೆ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.  ಒಡವೆ ಧರಿಸಿದ ಒಂಟಿ ಮಹಿಳೆಯರನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯ ಕುಡಿಸಿ ಕೊಲೆ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಈ ಹಂತಕಿಯರ ಬಂಧನದಿಂದ ಹಾಸನದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ರೂಪ, ಪಾರ್ವತಮ್ಮ, ಶ್ರೀನಿಧಿ, ದಿವ್ಯ, ಲತಾ, ಶ್ವೇತ ಹಾಸನ ಹಂತಕಿಯರಾಗಿದ್ದು, ಇವರಿಂದ 6 ಲಕ್ಷ ಮೌಲ್ಯದ 170 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಿಸಿದ್ದ ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 6ರಂದು ಉದ್ದೂರು ಕೆರೆಯ ಸಮೀಪದ ಜೋಳದ ಹೊಲದ ಪಕ್ಕ ಈಚಲು ಮರದ ಕೆಳಗೆ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಆಲೂರು ಪೊಲೀಸರು ಮಹಿಳೆ ನಾಪತ್ತೆ ಬಗ್ಗೆ ದೂರು ನೀಡಿದ್ದ ವಾರಸುದಾರರಿಗೆ ವಿಷಯ ತಿಳಿಸಿದ್ದರು.  ವಾರಸುದಾರರು ಸ್ಥಳಕ್ಕೆ ಬಂದು ಶವವನ್ನು ಹಾಗು ಮೈಮೇಲಿದ್ದ ಬಟ್ಟೆಗಳನ್ನು ನೋಡಿ ಇವರು ಆಲೂರು ತಾಲ್ಲೂಕಿನ ಕಾಣಿಗೆರೆ ಗ್ರಾಮದ ಸಣ್ಣಮ್ಮ(80) ಎಂದು ಗುರುತಿಸಿದ್ದಾರೆ.  ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಮಗ ನಿಂಗರಾಜು ನಮ್ಮ ತಾಯಿಯನ್ನು ಯಾರೋ ಕೊಲೆ ಮಾಡಿದ್ದಾರೆಂದು ಪೆನ್ಷನ್ ಮೊಹಲ್ಲಾ ಪೊಲೀಸರಿಗೆ ದೂರು ನೀಡಿ, ತಾಯಿಯ ಸ್ನೇಹಿತರಾದ ರೂಪ, ಪಾರ್ವತಮ್ಮ ಮೇಲೆ ಶಂಕೆ ವ್ಯಕ್ತಪಡಿಸಿದ್ದರು.

ಈ ಪ್ರಕರಣದ ಪತ್ತೆಗಾಗಿ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಪೂರ್ ವಾಡ್, ಹೊಳೆನರಸೀಪುರ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡೆಕ್ಕ ಕಿಶೋರ್ ಬಾಬ, ಆರಕ್ಷಕ ಉಪಾಧೀಕ್ಷಕ ಜಯರಾಮ್ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪೆನ್ಷನ್ ಮೊಹಲ್ಲಾ ಠಾಣೆ ಪಿಎಸ್ಐ ಆರೋಕಿಯಪ್ಪ , ನಗರ ಠಾಣೆಯ ಪಿಎಸ್ ಐ ಸುರೇಶ, ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಪ್ರಮೋದ್ ಕುಮಾರ್, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ರಂಗೇಗೌಡ, ರಂಗಪ್ಪ , ಅಣ್ಣೇಗೌಡ, ಜಯಣ್ಣ ರಂಗಸ್ವಾಮಿ, ಪ್ರದೀಪ್ ಕುಮಾರ್, ರಘು, ಸೋಮೇಗೌಡ ಅವರನ್ನೊಳಗೊಂಡ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ತಂಡ ಅನುಮಾನಾಸ್ಪದ ಮಹಿಳೆ ರೂಪ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಮತ್ತು ಪಾರ್ವತಮ್ಮ ಬ್ರೋಕರ್ ಕೆಲಸ ಮಾಡುತ್ತಿದ್ದ ಸಣ್ಣಮ್ಮ ಅವರಿಗೆ ಹಣದ ಆಮಿಷ ತೋರಿಸಿ ಅವರನ್ನು ಗಂಡು ತೋರಿಸುವಂತೆ ಹೇಳಿ ಪುಸಲಾಯಿಸಿ ಆಟೋದಲ್ಲಿ ಉದ್ದೂರುಕೆರೆ ರಸ್ತೆ ಬಳಿ ಜೋಳದ ಹೊಲದ ಹತ್ತಿರ ಕರೆದೊಯ್ದು ಸುಸ್ತಾಗಿದ್ದ ಸಣ್ಣಮ್ಮರವರನ್ನು ಕೂರಿಸಿ ಮೊದಲೇ ತಂದಿದ್ದ ನಿದ್ದೆ ಮಾತ್ರೆ ಮಿಶ್ರಿತ ತಂಪು ಪಾನೀಯವನ್ನು ಕುಡಿಸಿ ಅವರು ನಿದ್ರೆಗೆ ಜಾರಿದಾಗ ಉಸಿರುಗಟ್ಟಿಸಿ ಅವರ ಮೈಮೇಲೆ ಇದ್ದ 50 ಗ್ರಾಂ ಚಿನ್ನಾಭರಣಗಳನ್ನು ಕಳಚಿಕೊಂಡು ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.  ಇದಲ್ಲದೆ ವಿಚಾರಣೆ ವೇಳೆಯಲ್ಲಿ ಇನ್ನು ಇಬ್ಬರು ಮಹಿಳೆಯರನ್ನು ಇದೇ ರೀತಿ ಕೊಲೆ ಮಾಡಿದ್ದಲ್ಲದೆ ಮತ್ತೊಬ್ಬ ಮಹಿಳೆಗೂ ವಂಚಿಸಿ ಆಭರಣ ದೋಚಿರುವುದು ಬೆಳಕಿಗೆ ಬಂದಿದೆ.

ಆರೋಪಿ ರೂಪ ಹಾಗೂ ಆಕೆಯ ಅಕ್ಕ ಪಾರ್ವತಿ ಇಬ್ಬರೂ ಸೇರಿ ಆಗಸ್ಟ್ 4ರಂದು ಅಗ್ರಹಾರ ಬೀದಿಯಲ್ಲಿ ಪರಿಚಯವಿರುವ ವತ್ಸಲಾ ಎಂಬುವರನ್ನು ಪುಸಲಾಯಿಸಿ ಶ್ರೀರಾಮನಗರದಲ್ಲಿರುವ ಮತ್ತೊಬ್ಬ ಅಕ್ಕ ಲತಾ ಮನೆಗೆ ಹೋಗಿ ಬರೋಣವೆಂದು ಕರೆದೊಯ್ದಿದ್ದಾರೆ. ಲತಾಳ ಮನೆಯಲ್ಲಿ ರೂಪ, ಪಾರ್ವತಿ, ಮಗಳು ಶ್ವೇತ ಸೇರಿ ಸಂಜೆ 6 ಗಂಟೆಗೆ ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯ ಕುಡಿಸಿ ಕೊಲೆ ಮಾಡಿ ಮೈಮೇಲಿದ್ದ 30 ಗ್ರಾಂ ಚಿನ್ನದ ಆಭರಣಗಳನ್ನು ಬಿಚ್ಚುಕೊಂಡು ಶವವನ್ನು ಅಂದು ಮಧ್ಯರಾತ್ರಿ 12 ಗಂಟೆಗೆ ಗೋಣಿಚೀಲದಲ್ಲಿ ತುಂಬಿಕೊಂಡು ಶ್ವೇತಾಳ ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗಿ ಶೆಟ್ಟಿಹಳ್ಳಿ ರಸ್ತೆ ಬದಿ ಬಿಸಾಡಿರುವುದು ತನಿಖೆಯಿಂದ ಕಂಡುಬಂದಿದೆ.

ಈ ಸಂಬಂಧ ಆ.8ರಂದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅನಾಥ ಶವದ ಪ್ರಕರಣ ಬೆಳಕಿಗೆ ಬಂದಂತಾಗಿದೆ.  ಇದಲ್ಲದೆ ಆ.21ರಂದು ಕೆ.ಹೊಸಕೊಪ್ಪಲಿನಲ್ಲಿರುವ ಪಾರ್ವತಿ ಮನೆಯಲ್ಲಿ ಇವರೆಲ್ಲ ಸೇರಿಕೊಂಡು ಹೊಸ ಕೊಪ್ಪಲಿನಲ್ಲಿ ಮಟನ್ ಅಂಗಡಿ ಇಟ್ಟುಕೊಂಡಿರುವ ಅಖ್ತರ್ ಉನ್ನೀಸಾ ಎಂಬುವರ ಬಳಿ ರೂಪ ಮತ್ತು ಶ್ವೇತ ಮೂರು ಕೆಜಿ ಮಟನ್ ಖರೀದಿಸಿ 500 ರೂ. ಹಣ ಕೊಟ್ಟು ಉಳಿದ 460 ರೂ.ಗಳನ್ನು ಮನೆಯಲ್ಲಿ ಕೊಡುವುದಾಗಿ ಹೇಳಿ ಅವರನ್ನು ಕರೆದಿದ್ದಾಳೆ.   ಇದಕ್ಕೆ ಒಪ್ಪದಿದ್ದಾಗ ನಮ್ಮ ಮನೆಯಲ್ಲಿ ಒಂದು ಕುರಿ ಇದೆ. ಅದನ್ನು ನೋಡಿಕೊಂಡು ಉಳಿಕೆ 460 ರೂ. ಪಡೆದುಕೊಂಡು ಹೋಗುವಂತೆ ಪುಸಲಾಯಿಸಿ ಅಖ್ತರ್ ಉನ್ನೀಸಾ ಅವರನ್ನು ಮನೆಗೆ ಕರೆದುಕೊಂಡು ಬಂದು ಅವರಿಗೆ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿ ಕೊಲೆ ಮಾಡಿ ಅವರ ಮೈಮೇಲಿದ್ದ 45 ಗ್ರಾಂ ಆಭರಣಗಳನ್ನು ಬಿಚ್ಚುಕೊಂಡು ಸಂಬಂಧಿಕ ಸೋಮಣ್ಣ ಎಂಬುವರ ಸಹಾಯದಿಂದ ಗೋಣಿಚೀಲದಲ್ಲಿ ಶವವನ್ನು ಹಾಕಿಕೊಂಡು ಶವವನ್ನು ಮಜ್ಜಿಗೆ ಕಟ್ಟೆ ರಸ್ತೆ ಹೊಲದ ಪಕ್ಕ ಚರಂಡಿಗೆ ಬಿಸಾಕಿದುದ್ದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.

ಮತ್ತೊಂದು ಪ್ರಕರಣ:

ಕಳೆದ 2015ರ ಅಕ್ಟೋಬರ್ 20ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಆರೋಪಿ ರೂಪ ಹಾಸನ ನಗರದ ಕುಂಬಾರ ಬೀದಿಯಲ್ಲಿ ವಾಸವಿರುವ ನಾಗಪ್ಪ -ನಿಂಗಾಜಮ್ಮ ದಂಪತಿ ಮನೆಯಲ್ಲಿದ್ದಾಗ ಶಾಸ್ತ್ರ ಕೇಳುವ ನೆಪದಲ್ಲಿ ಬಂದು ಮೊದಲೇ ತಂದಿದ್ದ ತಂಪು ಪಾನೀಯ ಕುಡಿಸಿ ಅವರು ನಿದ್ರೆಗೆ ಜಾರಿದಾಗ ನಿಂಗಾಜಮ್ಮ ಮೈಮೇಲಿದ್ದ 75 ಗ್ರಾಂ ಚಿನ್ನದ ಒಡವೆಗಳನ್ನು ಕಸಿದುಕೊಂಡು ಹೋಗಿದುದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.  ಒಟ್ಟಾರೆ ಈ ಖತರ್ನಾಕ್ ಮಹಿಳಾ ಗ್ಯಾಂಗ್ನ್ನು ಬಂಧಿಸುವ ಮೂಲಕ ಪೊಲೀಸರು ಮುಂದೆ ಸಂಭವಿಸಬಹುದಾದಂಥ ಇಂತಹ ಪ್ರಕರಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin