ಕಲಬುರ್ಗಿಯಲ್ಲಿ ಜಿಲ್ಲೆಯಲ್ಲಿ ಲಘು ಭೂಕಂಪ : ಜನರು ಆತಂಕ ಪಡುವ ಅಗತ್ಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Earthquake-01

ಬೆಂಗಳೂರು, ಅ.16-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಿನ್ನೆ ಲಘು ಭೂಕಂಪ ಸಂಭವಿಸಿದ್ದು, ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಿಂದೀಚೆಗೆ ಸುಮಾರು 8 ಬಾರಿ ಭೂಮಿ ಕಂಪಿಸಿರುವುದು ಜಿಲ್ಲೆಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಕಲಬುರ್ಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದ್ದು, ಈವರೆಗೂ ಯಾವುದೇ ಆಸ್ತಿ, ಪಾಸ್ತಿ ಹಾನಿಯಾಗಿರುವುದು ವರದಿಯಾಗಿಲ್ಲ. ಭೂಕಂಪನದ ಜೊತೆಗೆ ಭೂಮಿಯಿಂದ ವಿಚಿತ್ರ ಸದ್ದು ಕೇಳಿ ಬರುತ್ತಿದ್ದು, ಜನರಲ್ಲಿ ಗೊಂದಲ ಮಿಶ್ರಿತ ಆತಂಕ ಮನೆ ಮಾಡಿದೆ.

ಜನ ರಾತ್ರಿ ವೇಳೆ ಮನೆಯಲ್ಲಿ ನೆಮ್ಮದಿಯಾಗಿ ಮಲಗಲು ಹಿಂದೆ-ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವಾರದಲ್ಲೇ ಪದೇ ಪದೇ 8 ಬಾರಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಲಬುರ್ಗಿ ಚಿಂಚೋಳಿ ಸೇರಿದಂತೆ ಕೆಲವು ತಾಲೂಕುಗಳನ್ನು ಭೂಕಂಪ ಪೀಡಿತ ಪ್ರದೇಶಗಳೆಂದು ಈ ಹಿಂದೆಯೇ ರಾಜ್ಯಸರ್ಕಾರ ಗುರುತಿಸಿದೆ. ಆದರೆ ಇದನ್ನು ನಿಭಾಯಿಸಲು ಜನರಿಗೆ ಅಗತ್ಯ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಸೆ.24ರಂದು ಜಿಲ್ಲೆಯ ಮೈನಾಳ್ ಗ್ರಾಮದಲ್ಲಿ ಭೂಕುಸಿತವಾಗಿ ಅರ್ಧ ಕಿಲೋ ಮೀಟರ್‍ಗಿಂತಲೂ ಹೆಚ್ಚು ಉದ್ದದ ಭೂಮಿ ಬಿರುಕು ಬಿಟ್ಟಿತ್ತು. ಅದೃಷ್ಟವಶಾತ್ ಇಲ್ಲಿ ಯಾವುದೇ ಮನೆಗಳಿಲ್ಲದೆ ಇರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಶುಕ್ರವಾರ ಚಿಂಚೋಳಿ ತಾಲೂಕಿನಲ್ಲಿ ಭೂಮಿ ಕಂಪಿಸಿರುವುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದು, 1.6 ಮ್ಯಾಗ್ನಿಟ್ಯೂಡ್‍ನಷ್ಟು ಭೂ ಕಂಪನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಅಷ್ಟೇನೂ ತೀವ್ರವಲ್ಲದ ಕಂಪನವಾಗಿರುವುದರಿಂದ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಜಿಲ್ಲೆಯ ಜನರಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವ ಬಗ್ಗೆ ಆತಂಕವಿದೆ. ಜೊತೆಗೆ ಭೂಮಿಯ ಒಳಭಾಗದಲ್ಲಿ ಗುಡುಗುಡು ಮಾದರಿ ವಿಚಿತ್ರ ಸದ್ದು ಕೇಳಿ ಬರುತ್ತಿದೆ. ಭೂಕಂಪನದಿಂದಾಗಲಿ ಅಥವಾ ಭೂಮಿಯಿಂದ ಬರುವ ಸದ್ದಿನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡುತ್ತಿದೆಯಾದರೂ ಸ್ಪಷ್ಟವಾದ ವೈಜ್ಞಾನಿಕ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಜನರಲ್ಲಿ ಮನೆ ಮಾಡಿರುವ ಭಯದ ವಾತಾವರಣ ದೂರವಾಗಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಭೂಕಂಪ ಸಂಭವಿಸಿ ಅಪಾರ ಪ್ರಮಾಣದ ಆಸ್ತಿ ಮತ್ತು ಪ್ರಾಣ ಹಾನಿಯಾಗಿರುವುದನ್ನು ಕೇಳಿರುವ ಕಲಬುರಗಿಯ ಜನ ತಮ್ಮ ಭಾಗದಲ್ಲೇ ಇಂತಹ ಆತಂಕಕಾರಿ ಘಟನೆಗಳು ನಡೆಯುತ್ತಿರುವುದರಿಂದ ಕಂಗಾಲಾಗಿದ್ದಾರೆ.

ಭಾರೀ ಭೂಕಂಪನ ಸಾಧ್ಯತೆ ಇಲ್ಲ ಆತಂಕ ಬೇಡ:

ಕಲಬುರಗಿ ಜಿಲ್ಲೆಯಲ್ಲಿ ಲಘು ಭೂಕಂಪ ಉಂಟಾಗಿರುವ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಈ ಕುರಿತು ಮಾತನಾಡಿದ ಅವರು, ಚಿಂಚೋಳಿ ತಾಲ್ಲೂಕಿನ ಎಚ್.ಪಿ.ಹೊಸಹಳ್ಳಿಯಲ್ಲಿ ಭೂಕಂಪನ ಮಾಪಕವನ್ನು ಅಳವಡಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು. ಶುಕ್ರವಾರ 1.6ರಷ್ಟು ತೀವ್ರತೆಯ ಭೂಕಂಪವಾದ ವರದಿಯಾಗಿದೆ. ನಮ್ಮ ವಿಜ್ಞಾನಿಗಳು ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಲಘು ಭೂಕಂಪನವಾಗಿರುವುದರಿಂದ ಭಾರೀ ಪ್ರಮಾಣದ ಭೂಕಂಪನ ಆಗುವ ಸಾಧ್ಯತೆಗಳು ಕಡಿಮೆ ಎಂದರು.

ಮತ್ತೆ ಭೂಕಂಪನ ಉಂಟಾದರೆ ನಾಳೆ ವಿಜ್ಞಾನಿಗಳ ತಂಡವನ್ನು ಸ್ಥಳ ಪರಿಶೀಲನೆಗಾಗಿ ಕಳುಹಿಸಿಕೊಡಲಾಗುವುದು. ಋತುಮಾನ ಆಧಾರಿತ ಬದಲಾವಣೆಗಳು ಭೂಗರ್ಭದಲ್ಲಿ ಉಂಟಾಗುತ್ತದೆ. ಕಲಬುರ್ಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ಮಳೆ ನೀರು ಭೂಮಿಯಲ್ಲಿ ಇಂಗಿದಾಗ ಭೂಮಿಯ ಒಳಭಾಗದಲ್ಲಿರುವ ಸುಣ್ಣದ ಕಲ್ಲಿನ ಪದರಗಳಿಗೆ ಸ್ಪರ್ಶವಾಗಿ ಒತ್ತಡ ಹೆಚ್ಚಾಗುತ್ತದೆ. ಸುಣ್ಣದಕಲ್ಲಿನ ಪದರಗಳು ಮರು ಹೊಂದಾಣಿಕೆಯಾಗುವ ಸಂದರ್ಭದಲ್ಲಿ ಶಬ್ಧ ಹಾಗೂ ಕಂಪನವಾಗುವುದು ಸಹಜ ಎಂಬುದು ಇದುವರೆಗಿನ ಅಧ್ಯಯನ ಮಾಹಿತಿ ಎಂದು ಅವರು ಸ್ಪಷ್ಟಪಡಿಸಿದರು.ಭೂಕಂಪನವಾಗಿರುವ ಚಿಂಚೋಳಿ ಪ್ರದೇಶದಲ್ಲಿ ತಮ್ಮ ಸಂಸ್ಥೆಯ ಒಬ್ಬ ಅಧಿಕಾರಿಯನ್ನು ಕಳೆದ ಮೂರು ದಿನಗಳಿಂದ ನಿಯೋಜಿಸಲಾಗಿದ್ದು, ತೀವ್ರ ನಿಗಾ ಇರಿಸಿದ್ದಾರೆ. ಯಾವುದೇ ರೀತಿಯ ಬದಲಾವಣೆ ಆದರೂ ಸಹ ಅದನ್ನು ಪರಿಶೀಲಿಸಿ ಜನರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin