ಕಾವೇರಿ ಹೋರಾಟಗಾರ ಬಿಡುಗಡೆಗಾಗಿ ನಾಳೆ ಪರಪ್ಪನ ಅಗ್ರಹಾರ ಜೈಲೆದುರು ವಾಟಾಳ್ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Vatal-01

ಬೆಂಗಳೂರು,ಅ.16-ಕಾವೇರಿ ಗಲಭೆಯಲ್ಲಿ ಬಂಧಿತರಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ನಾಳೆ ಕನ್ನಡ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.  ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಅವರು ಸೆಪ್ಟೆಂಬರ್ 12ರಂದು ನಡೆದ ಕಾವೇರಿ ಹೋರಾಟದ ಸಂದರ್ಭದಲ್ಲಿ ಬಂಧಿತರಾದವರನ್ನು ಸರ್ಕಾರ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇದಕ್ಕಾಗಿ ನಾಳೆ ಜೈಲಿನ ಮುಂದೆ ಸತ್ಯಾಗ್ರಹ ನಡೆಸುತ್ತೇವೆ. ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದ್, ಪ್ರವೀಣ್‍ಕುಮಾರ್ ಶೆಟ್ಟಿ , ಕೆ.ಆರ್.ಕುಮಾರ್, ಸೋಮಶೇಖರ್ ದೇವ್, ಶಿವರಾಮೇಗೌಡ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಜೀವ ಜಲಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸಿ ಜೈಲಿಗಟ್ಟಿರುವ ಕ್ರಮ ಖಂಡನೀಯ. ಅಮಾಯಕರಾದ ವಿದ್ಯಾರ್ಥಿಗಳನ್ನು ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಅವರಿಗೆ ಜಾಮೀನಿನ ಮೇಲೆ ಬಿಡುಗಡೆಯಾಗದಂತಹ ಪ್ರಕರಣಗಳನ್ನು ದಾಖಲಿಸಿದ್ದಾರೆ.  ಸಾವಿರಕ್ಕೂ ಹೆಚ್ಚು ಜನ ಒಂದು ತಿಂಗಳಿನಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೋರಾಟಗಾರರಾದ ನಾವು ಕೈಕಟ್ಟಿ ಕುಳಿತಿಕೊಳ್ಳಲು ಸಾಧ್ಯವಿಲ್ಲ. ನಾಡಿಗಾಗಿ ಹೋರಾಟ ಮಾಡಿದವರನ್ನು ಹೊರತರಲೇಬೇಕಿದೆ. ಅದಕ್ಕಾಗಿ ನಾವು ಜೈಲಿನ ಮುಂದೆ ಸತ್ಯಾಗ್ರಹ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.  ಮಹದಾಯಿಗಾಗಿ ಹೋರಾಟ ಮಾಡಿದ ರೈತರನ್ನು ಸರ್ಕಾರ ಬಿಡುಗಡೆ ಮಾಡಲು ಯಾವ ನೆರವು ನೀಡಿತೋ ಅದೇ ರೀತಿ ಕಾವೇರಿ ಹೋರಾಟಗಾರರಿಗೂ ನೆರವು ನೀಡಬೇಕು ಎಂದು ವಾಟಾಳ್ ಆಗ್ರಹಿಸಿದರು.  ಗಲಭೆಯಲ್ಲಿ ದುಷ್ಕೃತ್ಯ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ ಅಮಾಯಕರು ಬಲಿಯಾಗುತ್ತಿರುವುದು ವಿಷಾದಕರ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin