ನಾಳೆ ಕಾವೇರಿ ಮೇಲ್ಮನವಿ ವಿಚಾರಣೆ : ಎಲ್ಲರ ಚಿತ್ತ ಸುಪ್ರೀಂಕೋರ್ಟ್‍ನತ್ತ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಆ.16-ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ನಾಳೆ ನಡೆಯಲಿದೆ. ಇದರಿಂದ ರಾಜ್ಯದ ಚಿತ್ತ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ. ವಿಶೇಷ ಮೇಲ್ಮನವಿ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.  ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸಮರ್ಥ ವಾದ ಮಂಡಿಸಲು ಅನುಕೂಲವಾಗುವಂತೆ ಸೂಕ್ತ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಈ ನಡುವೆ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಅಧ್ಯಯನದ ವರದಿಯನ್ನು ಸುಪ್ರೀಂಕೋರ್ಟ್‍ಗೆ ಇಂದು ಸಲ್ಲಿಸಲಾಗಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಕೇಂದ್ರದ ಉನ್ನತ ತಾಂತ್ರಿಕ ತಜ್ಞರ ತಂಡ ಈ ಉಭಯ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು.
ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿರುವ ಅಂತಿಮ ಆದೇಶದಿಂದ ರಾಜ್ಯಾಕ್ಕಾಗಿರುವ ಅನ್ಯಾಯವನ್ನು ಪರಿಹರಿಸಿಕೊಳ್ಳಲು ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿತ್ತು. ಅದೇ ರೀತಿ ಕಾವೇರಿ ಜಲಾನಯನದ ಭಾಗದ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳು ಸಹ ಸ್ಪಷ್ಟನೆ ಬಯಸಿ ಸುಪ್ರೀಂಕೋರ್ಟ್‍ನ ಮೊರೆ ಹೋಗಿದ್ದವು.
ವಿಶೇಷ ಮೇಲ್ಮನವಿಯಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡಬೇಕಾಗಿರುವ ತಿಂಗಳುವಾರು ಹಂಚಿಕೆ ಆದೇಶ ರದ್ದುಪಡಿಸಬೇಕು, ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲ ಹಾಗೂ ಹಿಂಗಾರು ಮಳೆಯ ಪ್ರಮಾಣವನ್ನು ಪರಿಗಣಿಸಬೇಕು, ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನದ ಭಾಗದ ನಗರ, ಪಟ್ಟಣಗಳ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು, ಮಳೆ ಅಭಾವ ಉಂಟಾದಾಗ ಸಂಕಷ್ಟ ಸೂತ್ರ ಪಾಲನೆಯಾಗಬೇಕು, ರಾಜ್ಯದ ಬೇಸಾಯದ ಪ್ರದೇಶವನ್ನು 18 ಲಕ್ಷ ಎಕರೆಯಿಂದ 24 ಲಕ್ಷ ಎಕರೆಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಪ್ರಸ್ತಾಪಿಸಿದೆ.
ಈಗಾಗಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಭಾರೀ ಹಿನ್ನಡೆ ಅನುಭವಿಸಿದ ರಾಜ್ಯ ಸರ್ಕಾರ ನಾಳೆ ಆರಂಭವಾಗುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸಮರ್ಥವಾಗಿ ವಾದ ಮಂಡಿಸಲು ಬೇಕಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

ಅ.18ರಂದು ಕರ್ನಾಟಕ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ಸುಪ್ರೀಂಕೋರ್ಟ್ ತ್ರಿಸದಸ್ಯಪೀಠದ ಮುಂದೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನದ ವರದಿಯನ್ನು ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದೆ.  ಕರ್ನಾಟಕದ ಕೆಆರ್‍ಎಸ್, ಹೇಮಾವತಿ ಜಲಾಶಯಗಳ ಪರಿಶೀಲನೆ ನಡೆಸಿದ ತಂಡ ಉಭಯ ಜಲಾಶಯಗಳ ವ್ಯಾಪ್ತಿಯಲ್ಲಿ ಉಂಟಾಗಿರುವ ಬೆಳೆ ಹಾನಿಯನ್ನು ಕೂಡ ಪರಾಮರ್ಶಿಸಿತ್ತು. ಅದೇ ರೀತಿ ತಮಿಳುನಾಡಿನ ಭವಾನಿ ಹಾಗೂ ಮೆಟ್ಟೂರು ಜಲಾಶಯಗಳ ಪರಿಶೀಲನೆಯನ್ನು ನಡೆಸಿದ ತಂಡ ಎರಡೂ ಜಲಾಶಯಗಳ ಜಲಾನಯನ ವ್ಯಾಪ್ತಿಯ ಬೆಳೆಯ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿತ್ತು.

ಈ ಸಂದರ್ಭದಲ್ಲಿ ಕಾವೇರಿ ಜಲಾನಯನ ಪ್ರದೇಶದ ಕೆಆರ್‍ಎಸ್, ಹೇಮಾವತಿ ಜಲಾಶಯಗಳ ಪ್ರದೇಶದ ರೈತರ ಪರಿಸ್ಥಿತಿಯ ಸಂಕಷ್ಟದ ಸಾಕ್ಷಾತ್ ದರ್ಶನವಾಗಿತ್ತು. ಎಲ್ಲ ವಿವರವನ್ನು ಖುದ್ದು ರೈತರಿಂದಲೇ ಪಡೆದಿದ್ದರು.  ವಿಶೇಷ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ತಜ್ಞರ ತಂಡದ ವರದಿಗೆ ಹೆಚ್ಚಿನ ಮಹತ್ವ ಬರಲಿದೆ. ಪದೇ ಪದೇ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್‍ನಲ್ಲಿ ಆದೇಶಗಳನ್ನು ನೀಡಿದ್ದರಿಂದ ರಾಜ್ಯ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು. ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆದಿತ್ತು. ಆದೇಶ ಪಾಲನೆ ಮಾಡದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರ ಎರಡು ಅಧಿವೇಶನಗಳನ್ನು ಕೂಡ ನಡೆಸಿತ್ತು. ಆಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸುಪ್ರೀಂಕೋರ್ಟ್ ತೀರ್ಪು ಕಾವೇರಿ ನ್ಯಾಯಾಧಿಕರಣ ರಚನೆಗೆ ನೀಡಿದ್ದ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಿತು. ವಾಸ್ತವಿಕ ಪರಿಸ್ಥಿತಿಯ ಅಧ್ಯಯನಕ್ಕೆ ಸೂಚಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin