ಕೆಲ್ಸ ಮಾಡೋಕೆ ಏನ್ರಿ ದಾಡಿ ನಿಮ್ಗೆ..? ಎಂಜಿಯರ್’ಗಳಿಗೆ ಮೇಯರ್ ಪದ್ಮಾವತಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Padmavathi-0002

ಬೆಂಗಳೂರು, ಅ.18-ಪ್ರಸಕ್ತ ಸಾಲಿನ ಬಜೆಟ್ ಅನುಷ್ಠಾನಕ್ಕೆ ಬಾಕಿ ಉಳಿದಿರುವುದು ಕೇವಲ ಐದು ತಿಂಗಳು… ಇನ್ನೂ ನೀವು ಯಾವುದೇ ಯೋಜನೆಯನ್ನೇ ಹಾಕಿಕೊಂಡಿಲ್ಲ… ಸಮರ್ಪಕವಾಗಿ ಕೆಲಸ ಮಾಡಲು ನಿಮಗೇನು ಧಾಡಿ.. ಸಂಬಂಧಪಟ್ಟ ಬಿಬಿಎಂಪಿ ಸದಸ್ಯರೊಂದಿಗೆ ಚರ್ಚಿಸಿ ಅಗತ್ಯ ಕಾರ್ಯಕ್ರಮ ರೂಪಿಸಿ…. ಇದು ಬಿಬಿಎಂಪಿ ಪೂರ್ವ ವಲಯದ ಕಾರ್ಯಪಾಲಕ ಅಭಿಯಂತರುಗಳಿಗೆ ಮೇಯರ್ ಪದ್ಮಾವತಿ ನೀಡಿದ ಕಟ್ಟುನಿಟ್ಟಿನ ಎಚ್ಚರಿಕೆ. ಮಲ್ಲೇಶ್ವರಂನ ಐಟಿಸಿ ಸಭಾಂಗಣದಲ್ಲಿ ಪೂರ್ವ ವಲಯ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮೇಯರ್ ಈ ರೀತಿ ಗಾಳಿ ಬಿಡಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಪಾಲಿಕೆ ಸದಸ್ಯರು ಕಾರ್ಯಪಾಲಕ ಅಭಿಯಂತರರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೇಯರ್ ಪದ್ಮಾವತಿ ಮಾತನಾಡಿ, ಎಲ್ಲ ಕಾರ್ಯಪಾಲಕ ಅಭಿಯಂತರುಗಳು ಈವರೆಗೆ ಯಾಕೆ ಸಭೆ ನಡೆಸಿಲ್ಲ. ಕೆಲಸ ಮಾಡಲು ನಿಮಗೇನು ಕಷ್ಟ. ಕೂಡಲೇ ನಿಮ್ಮ ನಿಮ್ಮ ವ್ಯಾಪ್ತಿಯ ಸದಸ್ಯರೊಂದಿಗೆ ಸೇರಿ ಸಭೆ ನಡೆಸಿ ಬಜೆಟ್‍ನಲ್ಲಿ ರೂಪಿಸಿರುವ ಅನುದಾನ ಬಳಕೆಗೆ ಕಾರ್ಯಕ್ರಮ ರೂಪಿಸಬೇಕು. ಬಾಕಿ ಇರುವುದು ಐದೇ ತಿಂಗಳು. ಅಷ್ಟರಲ್ಲಿ ನಗರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸದೆ ಹೋದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನಿಮ್ಮ ವ್ಯಾಪ್ತಿಯಲ್ಲಿ ಎಇ, ಎಇಇ ಹುದ್ದೆಗಳು ಖಾಲಿ ಇವೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ನಿಮ್ಮ ಕಾರ್ಯವೈಖರಿ ನೋಡಿದರೆ ಗೊತ್ತಾಗುತ್ತದೆ ನೀವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೀರ ಎಂಬುದು ಎಂದರು.

ಸಂಜೆ ವೇಳೆಗೆ ಎಷ್ಟು ಹುದ್ದೆ ಖಾಲಿ ಇದೆ, ಎಲ್ಲೆಲ್ಲಿ ಖಾಲಿ ಇದೆ ಎಂಬುದರ ಬಗ್ಗೆ ವಿವರ ನೀಡಬೇಕು. ಇದರ ಜತೆಗೆ ಸಾಮೂಹಿಕ ವರ್ಗಾವಣೆಯಲ್ಲಿ ವರ್ಗಗೊಂಡಿರುವ ಕೆಲ ಅಧಿಕಾರಿಗಳು ನಿಯೋಜಿಸಿದ ಸ್ಥಳಕ್ಕೆ ತೆರಳದೆ ಹಾಲಿ ಇರುವ ಹುದ್ದೆಯಲ್ಲೇ ಮುಂದುವರೆದಿದ್ದಾರೆಂಬುದರ ಬಗ್ಗೆ ದೂರು ಬಂದಿದೆ. ತಕ್ಷಣ ಅಂತವರನ್ನು ವರ್ಗಾವಣೆ ಮಾಡಬೇಕು ಎಂದು ಸೂಚಿಸಿದರು.
ಬಜೆಟ್‍ನಲ್ಲಿ ಮೀಸಲಿಟ್ಟಿರುವ ರಸ್ತೆ ಗುಂಡಿ ಮುಚ್ಚುವುದು, ತೋಟಗಾರಿಕೆ, ಬೀದಿ ದೀಪ ನಿರ್ವಹಣೆಗೆ ನಿಗದಿಪಡಿಸಿರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಹೆಚ್ಚಳವಾಗಿರುವ ಬೀದಿ ನಾಯಿಗಳ ನಿಯಂತ್ರಣಕ್ಕೂ ಅಗತ್ಯ ಕ್ರಮಕೈಗೊಳ್ಳುವಂತೆ ಮೇಯರ್ ಸೂಚಿಸಿದರು. ಉಪಮೇಯರ್ ಆನಂದ್, ಪೂರ್ವವಲಯದ ಅಧಿಕಾರಿಗಳು, ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin